ಪಿಎಂ ಕೇರ್ಸ್: ಗುಜರಾತ್ ಸಂಸ್ಥೆಯಿಂದ ವೆಂಟಿಲೇಟರ್‌ಗಳ ಖರೀದಿಗೆ ಆರೋಗ್ಯ ಸಚಿವಾಲಯದ ಒಪ್ಪಿಗೆ ಇರಲಿಲ್ಲ

Update: 2020-08-23 17:47 GMT

ಮುಂಬೈ,ಆ.23: ಕೇಂದ್ರ ಸರಕಾರವು ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಗುಜರಾತಿನ ಜ್ಯೋತಿ ಸಿಎನ್‌ಸಿ ಆಟೋಮೇಷನ್ ಲಿ.ಸಂಸ್ಥೆಯಿಂದ ಖರೀದಿಗೆ ಬೇಡಿಕೆ ಸಲ್ಲಿಸಿದ್ದ ವೆಂಟಿಲೇಟರ್‌ಗಳಿಗೆ ಜುಲೈ 20ಕ್ಕೆ ಇದ್ದಂತೆ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ (ಡಿಜಿಎಸ್‌ಎಸ್)ದ ತಾಂತ್ರಿಕ ಸಮಿತಿಯ ಶಿಫಾರಸು ದೊರಕಿರಲಿಲ್ಲ ಎನ್ನುವುದನ್ನು ಆರ್‌ಟಿಐ ಕಾಯ್ದೆಯಡಿ ಪಡೆದುಕೊಂಡ ದಾಖಲೆಗಳು ಬಹಿರಂಗಗೊಳಿಸಿವೆ ಎಂದು Thewire.in ವರದಿ ಮಾಡಿದೆ.

ಜ್ಯೋತಿ ಸಿಎನ್‌ಸಿ ವೆಂಟಿಲೇಟರ್‌ಗಳ ಪೂರೈಕೆಗಾಗಿ ಮೇ ತಿಂಗಳಿನಲ್ಲಿ ಆರೋಗ್ಯ ಸಚಿವಾಲಯದಿಂದ ಮುಂಗಡ ಹಣವನ್ನು ಪಡೆದುಕೊಂಡಿತ್ತಾದರೂ ಕಳೆದ ತಿಂಗಳವರೆಗೂ ದೇಶಾದ್ಯಂತ ಯಾವುದೇ ಆಸ್ಪತ್ರೆಯಲ್ಲಿ ಅದರ ವೆಂಟಿಲೇಟರ್‌ಗಳನ್ನು ಸ್ಥಾಪಿಸಲಾಗಿಲ್ಲ.

ಬಿಇಎಲ್ ಸೇರಿದಂತೆ ಇತರ ಮೂರು ಕಂಪನಿಗಳಿಂದ ವೆಂಟಿಲೇಟರ್‌ಗಳ ಖರೀದಿಗೆ ತಾಂತ್ರಿಕ ಸಮಿತಿಯು ಕಳೆದ ತಿಂಗಳು ಅನುಮತಿ ನೀಡಿದೆ. ಆ ಬಳಿಕ ಈ ಸಮಿತಿಯು ಯಾವುದೇ ಹೊಸ ಪರೀಕ್ಷೆಗಳನ್ನು ನಡೆಸಿದೆಯೇ ಅಥವಾ ಯಾವುದೇ ಮರುಮಾಹಿತಿಯನ್ನು ಒದಗಿಸಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಜ್ಯೋತಿ ಸಿಎನ್‌ಸಿಯ ವೆಂಟಿಲೇಟರ್‌ಗಳು ನಿರೀಕ್ಷಿತ ಫಲಿತಾಂಶಗಳನ್ನು ನೀಡಲು ವಿಫಲವಾಗಿವೆ ಎಂದು ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯ ಅಧೀಕ್ಷಕರು ರಾಜ್ಯ ಸರಕಾರಕ್ಕೆ ಪತ್ರ ಬರೆದ ಬಳಿಕ ಕಳೆದ ಮೇ ತಿಂಗಳಿನಲ್ಲಿ ಕಂಪನಿಯ ‘ಧಾಮನ್-1’ವೆಂಟಿಲೇಟರ್‌ಗಳು ವಿವಾದದ ಕೇಂದ್ರಬಿಂದುವಾಗಿದ್ದವು.

ಜ್ಯೋತಿ ಸಿಎನ್‌ಸಿಯ ಮಾಜಿ ಮತ್ತು ಹಾಲಿ ಪ್ರವರ್ತಕರು ಬಿಜೆಪಿಯ ಹಿರಿಯ ನಾಯಕರೊಂದಿಗೆ ನಂಟು ಹೊಂದಿದ್ದಾರೆ ಎಂದು ಸುದ್ದಿ ಜಾಲತಾಣ ‘ದಿ ವೈರ್’ ಆಗ ವರದಿ ಮಾಡಿತ್ತು. ಕಂಪನಿಯ ಕೆಲವು ಮಾಜಿ ಪ್ರವರ್ತಕರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದುಬಾರಿ ಬೆಲೆಯ ಸೂಟ್‌ನ್ನು ಕಾಣಿಕೆಯಾಗಿ ನೀಡಿದ್ದ ವಿವಾದದೊಂದಿಗೆ ಗುರುತಿಸಿಕೊಂಡಿದ್ದ ಉದ್ಯಮ ಕುಟುಂಬವೂ ಸೇರಿದೆ. ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾಗವತ್ ಅವರು ಆರೋಗ್ಯ ಸಚಿವಾಲಯದಿಂದ ಪಡೆದುಕೊಂಡಿರುವ ಉತ್ತರವು,ಹಿಂದೆ ಪ್ರಸ್ತಾಪಿಸಲಾಗಿದ್ದ ಐದು ಕಂಪನಿಗಳ ಬದಲು ಮೂರು ಕಂಪನಿಗಳಿಂದ ಈ ಮೊದಲು ಬೇಡಿಕೆ ಸಲ್ಲಿಸಿದ್ದ 58,850 ವೆಂಟಿಲೇಟರ್‌ಗಳ ಬದಲು 40,350 ವೆಂಟಿಲೇಟರ್‌ಗಳ ಖರೀದಿಗೆ ತಾಂತ್ರಿಕ ಸಮಿತಿಯು ಒಪ್ಪಿಗೆ ನೀಡಿದೆ ಎಂದು ತಿಳಿಸಿದೆ.

ಮೇ ತಿಂಗಳಿನಲ್ಲಿ ಒಟ್ಟು 22.5 ಕೋ.ರೂ.ಗಳ ಮುಂಗಡವನ್ನು ಸ್ವೀಕರಿಸಿದ್ದ ಜ್ಯೋತಿ ಸಿಎನ್‌ಸಿ ಮತ್ತು ಆಂಧ್ರಪ್ರದೇಶ ಮೆಡ್‌ಟೆಕ್ ರೆನ್ ಕಂಪನಿಗಳಿಗೆ ಜುಲೈ 20ಕ್ಕೆ ಇದ್ದಂತೆ ತಾಂತ್ರಿಕ ಸಮಿತಿಯ ಶಿಫಾರಸು ದೊರಕಿರಲಿಲ್ಲ ಎಂದೂ ಉತ್ತರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News