ದಿಲ್ಲಿ ಹಿಂಸಾಚಾರದಲ್ಲಿ ಪೊಲೀಸರು ಶಾಮೀಲಾಗಿದ್ದರು, ಸಮಗ್ರ ತನಿಖೆ ಅಗತ್ಯವಿದೆ: ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್

Update: 2020-08-28 14:23 GMT

ಹೊಸದಿಲ್ಲಿ,ಆ.28: ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ನಡೆದಿದ್ದ ಹಿಂಸಾಚಾರಗಳಲ್ಲಿ ದಿಲ್ಲಿ ಪೊಲೀಸರು ಭಾಗಿಯಾಗಿದ್ದರು ಎಂಬ ಆರೋಪಗಳ ಕುರಿತು ಈವರೆಗೆ ಯಾವುದೇ ತನಿಖೆಯನ್ನು ನಡೆಸಲಾಗಿಲ್ಲ ಎಂದು ಎನ್‌ಜಿಒ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಶುಕ್ರವಾರ ಹೇಳಿದೆ. ಸಿಎಎ ಬೆಂಬಲಿಗರು ಮತ್ತು ವಿರೋಧಿಗಳ ನಡುವಿನ ಗಲಭೆಗಳಲ್ಲಿ ಕನಿಷ್ಠ 53 ಜನರು ಕೊಲ್ಲಲ್ಪಟ್ಟು,ನೂರಾರು ಜನರು ಗಾಯಗೊಂಡಿದ್ದರು.

 ಫೆಬ್ರವರಿಯಲ್ಲಿ ನಡೆದಿದ್ದ ಹಿಂಸಾಚಾರಗಳಲ್ಲಿ ದಿಲ್ಲಿ ಪೊಲೀಸ್ ಸಿಬ್ಬಂದಿಗಳು ಶಾಮೀಲಾಗಿದ್ದರು ಮತ್ತು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆರು ತಿಂಗಳಾದರೂ ದಿಲ್ಲಿ ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ಈವರೆಗೆ ಒಂದೇ ಒಂದು ತನಿಖೆ ಆರಂಭಗೊಂಡಿಲ್ಲ ಎಂದು ತನ್ನ ವರದಿಯಲ್ಲಿ ತಿಳಿಸಿರುವ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್, ಪೊಲೀಸರು ಪ್ರಶಂಸನೀಯ ಕೆಲಸವನ್ನು ಮಾಡಿದ್ದಾರೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಹಿಂಸಾಚಾರವು ಮಾನವ ಹಕ್ಕು ಉಲ್ಲಂಘನೆಗಳನ್ನು ಬಯಲುಗೊಳಿಸಿದೆ ಎಂದಿದೆ.

 ವರದಿಯು ಹಲವಾರು ಹಿಂಸಾಚಾರ ಸಂತ್ರಸ್ತರ ಹೇಳಿಕೆಗಳನ್ನು ಆಧರಿಸಿದೆ ಎಂದು ತಿಳಿಸಿರುವ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್,ಪೊಲೀಸರು ಗುಂಪಿನ ಜೊತೆ ಸೇರಿಕೊಂಡು ಕಲ್ಲುತೂರಾಟ ನಡೆಸಿದ್ದರು ಮತ್ತು ಅಶ್ರುವಾಯು ಪ್ರಯೋಗಿಸಿದ್ದರು ಎಂದು ಆರೋಪಿಸಿದೆ.

ನೆರವಿಗಾಗಿ ತಮ್ಮ ಕೋರಿಕೆಗಳಿಗೆ ಸ್ಪಂದಿಸಲು ಪೊಲೀಸರು ವಿಫಲರಾಗಿದ್ದರು ಎಂದು ಈಶಾನ್ಯ ದಿಲ್ಲಿಯ ಹಿಂದುಗಳು ಮತ್ತು ಮುಸ್ಲಿಮರು ಆರೋಪಿಸಿದ್ದಾರೆ ಎಂದು ವರದಿಯು ತಿಳಿಸಿದೆ.

  ಕೆಲವೊಮ್ಮೆ ಪೊಲೀಸರು ಹಿಂಸಾಚಾರ ನಡೆಯುತ್ತಿದ್ದ ಸ್ಥಳದಲ್ಲಿದ್ದರೂ ಮಧ್ಯಪ್ರವೇಶಿಸಿರಲಿಲ್ಲ ಎನ್ನುವುದು ಕಂಡುಬಂದಿದೆ. ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಬಂಧಿಸಲು ಮಾತ್ರ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶ ಮಾಡಿದ್ದರು ಮತ್ತು ಹಿಂಸಾಚಾರದ ಬಲಿಪಶುಗಳ ದೂರುಗಳನ್ನು ಸ್ವೀಕರಿಸಲು ನಿರಾಕರಿಸಿದ್ದರು. ‘ನಿಮಗೆ ಆಜಾದಿ ಬೇಕಾಗಿದೆ. ಇಲ್ಲಿದೆ ನಿಮ್ಮ ಆಜಾದಿ,ತೆಗೆದುಕೊಳ್ಳಿ ’ಎನ್ನುವುದು ನೆರವು ಕೋರಿದ್ದ ಕರೆಗಳಿಗೆ ಸಾಮಾನ್ಯ ಉತ್ತರವಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಅವರು ಫೆ.26ರಂದು ಈಶಾನ್ಯ ದಿಲ್ಲಿಗೆ ಭೇಟಿ ನೀಡಿದ ಬಳಿಕ ಹಿಂಸಾಚಾರ ನಿಂತಿತ್ತು ಎಂಬ ಹೇಳಿಕೆಯನ್ನು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಪ್ರಶ್ನಿಸಿದೆ. ದೋವಲ್ ಜನರಿಗೆ ಸುರಕ್ಷತೆಯ ಭರವಸೆ ನೀಡಿದ ಮರುದಿನವೇ ಗುಂಪೊಂದು ಬಾಬು ಖಾನ್ ಎಂಬಾತನ ಮನೆಗೆ ನುಗ್ಗಿ ಆತನ ಇಬ್ಬರು ಪುತ್ರರನ್ನು ಹತ್ಯೆ ಮಾಡಿದ್ದನ್ನು ವರದಿಯು ಉಲ್ಲೇಖಿಸಿದೆ.

 ಹಿಂಸಾಚಾರಗಳು ಹೆಚ್ಚಾದಾಗ ಹೆಚ್ಚಿನ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್‌ಗಳನ್ನು ಮುಚ್ಚಿದ್ದರಿಂದ ಗಾಯಾಳುಗಳಿಗೆ ಚಿಕಿತ್ಸೆಯೂ ದೊರೆಯುತ್ತಿರಲಿಲ್ಲ. ದಂಗೆಕೋರರು ರಸ್ತೆಗಳನ್ನು ತಡೆದು ಆ್ಯಂಬುಲನ್ಸ್‌ಗಳಿಗೆ ಪ್ರವೇಶ ನಿರಾಕರಿಸಿದ್ದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಿಸಿತ್ತು. ಇಂತಹ ಕೃತ್ಯಗಳನ್ನು ತಡೆಯಲು ಪೊಲೀಸರು ಅಸಮರ್ಥರಾಗಿದ್ದರು ಎಂದು ವರದಿ ತಿಳಿಸಿದೆ.

  ‘ಜನರ ಕೂಗುಗಳಿಗೆ ಪೊಲೀಸರು ಸ್ಪಂದಿಸುತ್ತಿರಲಿಲ್ಲ. ಕೊನೆಗೆ ನಮ್ಮ ವಕೀಲರೋರ್ವರು ಮಧ್ಯರಾತ್ರಿಯಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯದ ಮನೆಬಾಗಿಲನ್ನು ಬಡಿದಿದ್ದರು. ಜನರ ಮತ್ತು ಆ್ಯಂಬುಲನ್ಸ್‌ಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಅವರು ಪೊಲೀಸರಿಗೆ ಆದೇಶಿಸಿದ ಬಳಿಕವಷ್ಟೇ ಜನರಿಗೆ ರಕ್ಷಣೆ ದೊರೆಯಲಾರಂಭಿಸಿತ್ತು ’ ಎಂಬ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಅವರ ಹೇಳಿಕೆಯನ್ನು ವರದಿಯು ಉಲ್ಲೇಖಿಸಿದೆ.

ಹಲವಾರು ಜನರಿಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು ಮತ್ತು ಈ ಪೈಕಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪೊಲೀಸರು ಹೆಚ್ಚಾಗಿ ಮುಸ್ಲಿಮರನ್ನೇ ನಿರ್ದಿಷ್ಟವಾಗಿ ಗುರುತಿಸಿ ಬಂಧಿಸುತ್ತಿದ್ದರು ಎಂದು ವರದಿಯು ತಿಳಿಸಿದೆ.

ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ಕುರಿತು ಕೇಂದ್ರ ಗೃಹ ಸಚಿವಾಲಯವು ತಕ್ಷಣವೇ ಸಮಗ್ರ,ಸ್ವತಂತ್ರ ಮತ್ತು ನಿಷ್ಪಕ್ಷ ತನಿಖೆಯನ್ನು ಆರಂಭಿಸಬೇಕು ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಆಗ್ರಹಿಸಿದೆ. ಗಲಭೆಗಳಲ್ಲಿ ದಿಲ್ಲಿ ಪೊಲೀಸರ ಪಾತ್ರದ ಕುರಿತು ಪಾರದರ್ಶಕ ವಿಚಾರಣೆ ನಡೆಯಬೇಕು ಎಂದಿರುವ ಅದು,ಆರೋಪಿ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ಬಾಕಿಯಿರುವಂತೆ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಹೇಳಿದೆ.

ನಾಗರಿಕ ಸಮಾಜದೊಂದಿಗೆ ಚರ್ಚಿಸಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದ್ವೇಷಾಪರಾಧಗಳನ್ನು ತಡೆಯಲು ಸಮಗ್ರ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಸೂಚಿಸಿರುವ ಅದು, ಹಿಂಸಾಚಾರದ ವಿರುದ್ಧ ವಿಶ್ವಸಂಸ್ಥೆಯ ನಿರ್ಣಯವನ್ನು ಬೇಷರತ್ತಾಗಿ ದೃಢೀಕರಿಸುವಂತೆ ಮತ್ತು ಹಿಂಸೆಯನ್ನು ಅಪರಾಧವನ್ನಾಗಿಸಿ ಕಾನೂನನ್ನು ಜಾರಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News