`ಗಣಿಗಾರಿಕೆಗೆ ಅವಕಾಶ' ಇಲ್ಲವೆಂದಾದಲ್ಲಿ ಕೈಗಾರಿಕಾಭಿವೃದ್ಧಿಗೆ ಅವಕಾಶ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2020-08-28 17:17 GMT

ಬೆಂಗಳೂರು, ಆ. 28: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ `ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಸಂಸ್ಥೆ'ಗೆ ಸೇರಿದ 12,109 ಎಕರೆ ಪ್ರದೇಶದ ಪೈಕಿ 2,213 ಪ್ರದೇಶವನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಿಕೊಳ್ಳಬಹುದಾಗಿದೆ. ಸೋಲಾರ್, ಆಟೋ ಮೊಬೈಲ್, ಎಲೆಕ್ಟ್ರಾನಿಕ್ಸ್ ಹಾಗೂ ಔಷಧ ಉತ್ಪಾದಿಸುವ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶವಿದೆ. ರೈಲ್ವೆ, ಎಕ್ಸಪ್ರೆಸ್ ವೇ, ಮುಂತಾದ ಉತ್ತಮ ಸಂಪರ್ಕ ವ್ಯವಸ್ಥೆಗಳಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಉಪಸ್ಥಿತಿಯಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. `ಈ ಪ್ರದೇಶದಲ್ಲಿ ನೈಸರ್ಗಿಕ ಸಂಪತ್ತಿನ ಬಗ್ಗೆ ಆರು ತಿಂಗಳೊಳಗಾಗಿ ಪರಿಶೀಲಿಸಿ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದಾಗಿದೆ' ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಕೆ.ಜಿ.ಎಫ್‍ನಲ್ಲಿರುವ ಗಣಿಗಾರಿಕೆಯಿಂದ ತೆಗೆದು ಹಾಕಿರುವ ಡಂಪಿಂಗ್‍ಗಳಲ್ಲಿ ಇತರೆ ಖನಿಜಗಳ ಲಭ್ಯತೆಯ ಬಗ್ಗೆಯೂ ಹಾಗೂ ರಾಜ್ಯ ಸರಕಾರದ ವತಿಯಿಂದ ಕೇಂದ್ರ ಜಂಟಿ ಕಾರ್ಯದರ್ಶಿಗಳು ಸಮೀಕ್ಷೆ ಕೈಗೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಬೇಕು. ಗಣಿಗಾರಿಕೆಗೆ ಅವಕಾಶವಿಲ್ಲವೆಂದಾದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಅವಕಾಶ ನೀಡಲಾಗುವುದು ಎಂದು ಪ್ರಹ್ಲಾದ್ ಜೋಶಿ ಇದೇ ವೇಳೆ ತಿಳಿಸಿದರು.

ರಾಜ್ಯಕ್ಕೆ ಒಡಿಶಾದ ಮಂದಾಕಿನಿ ಮತ್ತು ದುರ್ಗಾಪುರ ಕಲ್ಲಿದ್ದಲು ಗಣಿಗಳನ್ನು ವಹಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅನುಮೋದನೆಗಳನ್ನು ಕೋರಿ ಒಡಿಶಾ ಸರಕಾರಕ್ಕೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರಕಾರವು ಹೊಸದಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಈ ಪ್ರಕ್ರಿಯೆಗಳನ್ನು ಪೂರೈಸಲು ಕನಿಷ್ಟ ಎರಡು ವರ್ಷಗಳಷ್ಟು ತಡವಾಗುವುದರಿಂದ ಅನುಮೋದನೆ ನೀಡಿ ಗಣಿಗಾರಿಕೆಗೆ ಅವಕಾಶ ಕಲ್ಪಿಸುವಂತೆ ಸಚಿವರನ್ನು ಕೋರಲಾಯಿತು. ಈ ಬಗ್ಗೆ ಪರಿಶೀಲಿಸಿ ಶೀಘ್ರವೇ ಅನುಮೋದನೆ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.

ದೋಣಿಮಲೆಯಲ್ಲಿ ಎನ್‍ಎಂಡಿಸಿ ಕಂಪೆನಿಗಳ 50 ವರ್ಷಗಳ ಅವಧಿ 2018ಕ್ಕೆ ಮುಕ್ತಾಯಗೊಂಡಿದ್ದು, ನವೀಕರಣದ ಬಗ್ಗೆ ಸ್ಪಷ್ಟತೆ ಇರಲಿಲ್ಲ. 2020ರ ನಂತರ ಯಾವುದೇ ಗಣಿಯನ್ನು ವಹಿಸಿದರೆ ಕೇಂದ್ರ ಸರಕಾರ ನಿಗದಿ ಮಾಡಿದ ಪ್ರೀಮಿಯಂ ದರವನ್ನು ಸಲ್ಲಿಸಬೇಕು. ನವೀಕರಣಕ್ಕೆ ಯಾವುದೇ ಅವಕಾಶವಿರಲಿಲ್ಲ. ಪಿಎಸ್‍ಯುಗೆ ಗ್ರಾಂಟ್ ಮೂಲಕ ಮಾತ್ರ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತಿತ್ತು. ಕೇಂದ್ರ ಗಣಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಪಾಲುದಾರರನ್ನೊಳಗೊಂಡ ಸಮಿತಿ ರಚಿಸಿ, 2015ರ ನಂತರ ಹಂಚಿಕೆ ಮಾಡಿರುವ ಗಣಿಗಾರಿಕೆಗೆ, ಯಾವ ಆಧಾರದ ಮೇಲೆ ಪಿಎಸ್‍ಯುಗಳು ಪ್ರೀಮಿಯಂ ನೀಡಬೇಕೆಂಬ ಬಗ್ಗೆ ಮೂರು ತಿಂಗಳೊಳಗೆ ತೀರ್ಮಾನಿಸಲಾಗುವುದು. ಈ ಸಮಿತಿ ನಿರ್ಧಾರ ಕೈಗೊಳ್ಳುವವರೆಗೆ ಪ್ರಸ್ತುತ ರಾಜ್ಯಕ್ಕೆ ನೀಡಲಾಗುತ್ತಿರುವ ಶೇ.15 ರಾಜಧನ(ರಾಯಲ್ಟಿ)ಯನ್ನು ಶೇ.37.25ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಸಿಂಗ್ರೇನಿ ಕಲ್ಲಿದ್ದಲು ಗಣಿಯಿಂದ ಪೂರೈಸಲಾಗುವ ಕಲ್ಲಿದ್ದಿಲಿನ ಬೆಲೆ ದುಬಾರಿಯಾಗಿದ್ದು, ಇದನ್ನು ಕಡಿಮೆ ಮಾಡಲು ಕೋರಲಾಯಿತು. ಈ ಬಗ್ಗೆ ಕ್ರಮ ವಹಿಸಲು ಕೇಂದ್ರ ಸಚಿವರು ಸೂಚಿಸಿದರು. ನಿಯಮಿತವಾಗಿ ಕರ್ನಾಟಕ ವಿದ್ಯುತ್ಛಕ್ತಿ ನಿಗಮ ನಿಯಮಿತಕ್ಕೆ ಸರಬರಾಜಾಗುವ 2.475 ಮಿಲಿಯನ್ ಟನ್ ಕಲ್ಲಿದ್ದಿಲಿನ ಜೊತೆಗ ಡಬ್ಲ್ಯೂಸಿ.ಎಲ್ ವತಿಯಿಂದ 6.00 ಮಿಲಿಯನ್ ಟನ್ ಕಲ್ಲಿದ್ದಲನ್ನು ರಾಯಚೂರು ಥರ್ಮಲ್ ಪ್ಲಾಂಟ್ ಗೆ ಸರಬರಾಜು ಮಾಡುವಂತೆ ಮನವಿ ಸಲ್ಲಿಸಲಾಯಿತು.

ಮಹಾರಾಷ್ಟ್ರದ ಬಾರಂಜಾದಲ್ಲಿ ವ್ಯಾಜ್ಯದ ಹಿನ್ನೆಲೆಯಲ್ಲಿ ಗಣಿಗಾರಿಕೆಯನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿತ್ತು. ಈ ಮಧ್ಯೆ ಕಲ್ಲಿದ್ದಲು ಕಳುವಾಗಿರುವುದರಿಂದ, ಕೇಂದ್ರ ಸರಕಾರ ಕಲ್ಲಿದ್ದಲು ನಿಯಂತ್ರಕರ (ಕೋಲ್ ಕಂಟ್ರೋಲರ್) ಮೂಲಕ ಕಲ್ಲಿದ್ದಲು ಸಂಗ್ರಹದ ಮೌಲ್ಯಮಾಪನ ಮಾಡಿಸಿ, ಮಹಾರಾಷ್ಟ್ರ ಸರಕಾರಕ್ಕೆ ಸಲ್ಲಿಸಬೇಕಿರುವ ರಾಯಲ್ಟಿ ನಿಗದಿಪಡಿಸಿ, ಕಲ್ಲಿದ್ದಿಲಿನ ವಿಲೇವಾರಿ ಪ್ರಕ್ರಿಯೆಗೆ ಮತ್ತು ಗಣಿಗಾರಿಕೆ ಪ್ರಾರಂಭಕ್ಕೆ ಅನುವು ಮಾಡಿಕೊಡಲು ಮಹಾರಾಷ್ಟ್ರ ಸಿಎಂ ಒಪ್ಪಿದ್ದಾರೆ. ರಾಜ್ಯಕ್ಕೆ ಇದರಿಂದ ಆದಾಯ ಹೆಚ್ಚಲಿದೆ ಎಂದು ತಿಳಿಸಲಾಗಿದೆ.

ಪ್ರಸ್ತುತ ಜಿ-2 ಮಟ್ಟದಲ್ಲಿ ಗಣಿಗಳನ್ನು ಹರಾಜು ಮಾಡಲಾಗುತ್ತಿತ್ತು. ರಾಜ್ಯ ಸರಕಾರ ಜಿ-3 ಮಟ್ಟದಲ್ಲಿ ಹರಾಜು ಮಾಡಲು ಮಾಡಿದ ಮನವಿಗೆ ಕೇಂದ್ರ ಸರಕಾರ ಸ್ಪಂದಿಸಿ ಜಿ-4 ಮಟ್ಟದಲ್ಲಿ ಹರಾಜು ಮಾಡಲು ಸಂಯೋಜಿತ ಪರವಾನಗಿಯನ್ನು ನೀಡಲಾಗುವುದೆಂದು ತಿಳಿಸಿದ ಪ್ರಹ್ಲಾದ್ ಜೋಶಿ, ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರಕಾರ ಸಲ್ಲಿಸಿದ ಎಲ್ಲ ಮನವಿಗಳನ್ನು ಪರಿಶೀಲಿಸಿ ಶೀಘ್ರದಲ್ಲಿಯೇ ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದರು.

ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಕಂದಾಯ ಸಚಿವ ಆರ್. ಅಶೋಕ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ್ರ ಜೈನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಕಂದಾಯ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್ ಜೈನ್, ನಿರ್ದೇಶಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News