ಟಿಪ್ಪು ಬಗ್ಗೆ ಎಚ್.ವಿಶ್ವನಾಥ್ ಸತ್ಯವನ್ನೇ ಹೇಳಿದ್ದಾರೆ, ಅದನ್ನು ಬಿಜೆಪಿಯವರು ಒಪ್ಪಿಕೊಳ್ಳಲಿ: ಸಿದ್ದರಾಮಯ್ಯ

Update: 2020-08-29 15:22 GMT

ಬೆಂಗಳೂರು, ಆ. 29: `ರಾಜ್ಯದಲ್ಲಿ ಮಧ್ಯಂತರ ಸರಕಾರ ಬರಲಿದೆ ಎಂಬುವುದು ಸುಳ್ಳು. ಯಾವುದೇ ಕಾರಣಕ್ಕೂ ನಾವಂತೂ ಸರಕಾರ ತೆಗೆಯುವ ಯಾವುದೇ ರೀತಿಯ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ' ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಅಸ್ಥಿರಗೊಳಿಸುವ ಯಾವ ಪ್ರಯತ್ನವನ್ನು ನಾವು ಮಾಡುವುದಿಲ್ಲ ಎಂದರು. ಮೈಸೂರು ಹುಲಿ ಎಂದೇ ಖ್ಯಾತಿ ಪಡೆದಿರುವ ಟಿಪ್ಪು ಸುಲ್ತಾನ್ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಸತ್ಯವನ್ನೇ ಹೇಳಿದ್ದಾರೆ. ಅದನ್ನು ಬಿಜೆಪಿಯವರು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

ಡಿ.ಜೆ.ಹಳ್ಳಿ ಘಟನೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಡಿ.ಜೆ.ಹಳ್ಳಿ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿಯೇ ಇದೆ, ಈಗಲೇ ಯಾರನ್ನೂ ಅಪರಾಧಿಗಳು ಅಂತಲೋ ಅಥವಾ ಅಮಾಯಕರು ಅಂತಲೋ ನಿರ್ಧರಿಸಲು ಸಾಧ್ಯವಿಲ್ಲ. ನಮ್ಮ ಪಕ್ಷದ ಶಾಸಕ ಝಮೀರ್ ಅಹ್ಮದ್ ಖಾನ್ ಅವರು ಗಲಭೆಯ ಆರೋಪಿಗಳನ್ನು ಅಮಾಯಕರು ಎಂದಿಲ್ಲ. ಗಲಭೆಯಲ್ಲಿ ಮೃತಪಟ್ಟ ಕುಟುಂಬದ ಸದಸ್ಯರು ತೀರ ಬಡವರು ಎನ್ನುವ ಕಾರಣಕ್ಕಾಗಿ ಪರಿಹಾರ ನೀಡಿದ್ದೇನೆ ಎಂದು ಹೇಳಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ವಿಚಾರದಲ್ಲಿ ನಮ್ಮ ತಕರಾರಿಲ್ಲ. ಈ ವಿಷಯದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ. ತನಿಖಾ ಸಂಸ್ಥೆಯ ವರದಿ ಬರುವ ಮುಂಚೆಯೇ ಗೃಹ ಸಚಿವರು ಯಾರನ್ನೂ ಅಪರಾಧಿ ಎಂದು ಪರಿಗಣಿಸುವುದು ಸರಿಯಲ್ಲ. ತನಿಖೆಯಾಗಿ ಅಪರಾಧಿಗಳನ್ನು ಪತ್ತೆ ಹಚ್ಚಿದ ನಂತರ ಅಂಥವರಿಗೆ ಕಠಿಣ ಶಿಕ್ಷೆ ನೀಡಲಿ. ಈ ಘಟನೆಯನ್ನು ನಾನು ಖಂಡಿಸುತ್ತೇನೆ, ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಸರಕಾರವನ್ನು ಒತ್ತಾಯಿಸುತ್ತೇನೆ ಎಂದರು.

ವಿವಾದ ಮಾಡಿಕೊಂಡಿದ್ದು ತಪ್ಪು: ರಾಯಣ್ಣ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜ್ಯ ಸರಕಾರ ಬೇಗನೆ ನಿರ್ಧಾರ ತೆಗೆದುಕೊಂಡಿದ್ದರೆ ಇಂದು ರಾಯಣ್ಣ ವರ್ಸಸ್ ಶಿವಾಜಿ, ಕನ್ನಡಿಗರು ವರ್ಸಸ್ ಮರಾಠಿಗರು ಎಂಬ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ 2 ಬಾರಿ ಕರೆ ಮಾಡಿ ಮಾತನಾಡಿದ್ದೇನೆ ಎಂದು ಸಿದ್ದರಾಮಯ್ಯ ವಿವರಿಸಿದರು.

ರಾಯಣ್ಣನ ವಿಚಾರವನ್ನು ವಿವಾದ ಮಾಡಿಕೊಳ್ಳುವುದೇ ದೊಡ್ಡ ತಪ್ಪು, ರಾಯಣ್ಣನವರು ಚೆನ್ನಮ್ಮನ ಸಂಸ್ಥಾನದಲ್ಲಿ ಸೈನಿಕನಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದವರು, ರಾಯಣ್ಣ ಇಂದಿನ ಯುವ ಜನರಿಗೆ ಸ್ಪೂರ್ತಿಯ ಸೆಲೆ, ಅಂಥವರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಹಿಂದೆಮುಂದೆ ನೋಡಬಾರದಾಗಿತ್ತು. ನಿನ್ನೆ ಸರಕಾರ ಮಾಡಿದ ಕೆಲಸವನ್ನು ಮೊದಲೇ ಮಾಡಿದ್ದರೆ ಬೆಳಗಾವಿಯಲ್ಲಿ ವಿವಾದ ಇಷ್ಟು ದೊಡ್ಡದಾಗುತ್ತಿರಲಿಲ್ಲ ಎಂದು ಅವರು ತಿಳಿಸಿದರು.

ಶಿವಾಜಿಯೂ ಸ್ವತಂತ್ರ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ, ಶಿವಾಜಿಯವರಂತೆ ರಾಯಣ್ಣನವರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು. ಇಬ್ಬರೂ ಗೌರವಕ್ಕೆ ಅರ್ಹರು, ಅಂತಹ ಮಹಾನ್ ವ್ಯಕ್ತಿಗಳ ಮಧ್ಯೆ ಸಂಘರ್ಷ ಉಂಟಾಗಲು ಸರ್ಕಾರ ಅವಕಾಶ ಮಾಡಿಕೊಡಬಾರದು. ಈ ಹೋರಾಟದಲ್ಲಿ ಕನ್ನಡಿಗರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗಿದೆ, ಅದನ್ನು ತಕ್ಷಣ ವಾಪಾಸು ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಸಚಿವ ಸಿ.ಟಿ.ರವಿಯವರು ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಹೋರಾಟವನ್ನು ವ್ಯಂಗ್ಯ ಮಾಡಿದ್ದಾರೆ. ಆ ಭಾಗದ ಜನರು ರಾಯಣ್ಣನ ಪ್ರತಿಮೆ ನಿರ್ಮಾಣಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ರಾಜಕೀಯ ಬಣ್ಣ ಕೊಡುವ ಅಗತ್ಯವಿಲ್ಲ. ಇದು ಬಹಳ ಹಿಂದಿನಿಂದಲೂ ಪ್ರತಿಮೆ ನಿರ್ಮಾಣಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಡ್ರಗ್ಸ್ ಜಾಲ, ತನಿಖೆಯಾಗಲಿ

ಮಾದಕ ದ್ರವ್ಯ (ಗಾಂಜಾ) ಮಾರಾಟ ಮತ್ತು ಸೇವನೆ ಎರಡೂ ಮಹಾ ಅಪರಾಧ. ಒಂದು ವೇಳೆ ರಾಜ್ಯದಲ್ಲಿ ಗಾಂಜಾ ಮಾರಾಟ ಆಗುತ್ತಿದ್ದರೆ ಅದಕ್ಕೆ ಸರಕಾರದ ವೈಫಲ್ಯವೇ ಕಾರಣ. ಮಾದಕ ವಸ್ತುಗಳನ್ನು (ಗಾಂಜಾ) ಮಾರಾಟ ಮಾಡುವವರು ಮತ್ತು ಸೇವನೆ ಮಾಡುವವರನ್ನು ಪತ್ತೆ ಹಚ್ಚಿ, ಸರಕಾರ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News