ಪ್ರತಿಮೆ ವಿವಾದ ಸುಖಾಂತ್ಯ: ರಾಯಣ್ಣ - ಶಿವಾಜಿ ಪ್ರತಿಮೆಗೆ ಸಚಿವರು, ಸಂಸದರಿಂದ ಮಾಲಾರ್ಪಣೆ

Update: 2020-08-29 13:47 GMT

ಬೆಳಗಾವಿ, ಆ.29: ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರು ಪ್ರತಿಷ್ಠಾಪನೆಯಿಂದಾಗಿ ವಿಕೋಪಕ್ಕೆ ತಿರುಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಡರಾತ್ರಿವರೆಗೂ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

ಎಡಿಜಿಪಿ ಅಮರಕುಮಾರ್ ಪಾಂಡೆ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎರಡೂ ಗುಂಪಿನ ಕಡೆಯವರು ಒಂದು ಹಂತಕ್ಕೆ ಬಂದಿದ್ದು, ವಿವಾದ ಸುಖಾಂತ್ಯ ಕಂಡಿದೆ. ರಾಯಣ್ಣ ಪ್ರತಿಮೆಯನ್ನು ಈಗ ಪ್ರತಿಷ್ಠಾಪಿಸಿರುವ ಸ್ಥಳದಲ್ಲಿಯೇ ಇರಿಸುವುದು ಹಾಗೂ ಆ ವೃತ್ತಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ನಾಮಕರಣ ಮಾಡಬೇಕು ಎಂಬ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಇದಕ್ಕೆ ಕನ್ನಡಪರ ಸಂಘಟನೆಯವರು, ಶಿವಾಜಿ ಮಹಾರಾಜರ ಭಕ್ತರು, ಗ್ರಾಮದ ಮುಖಂಡರು, ಎಂಇಎಸ್ ಹಾಗೂ ಶಿವಸೇನೆಯವರು ಸಮ್ಮತಿ ಸೂಚಿಸಿದ್ದರಿಂದ ವಿವಾದಕ್ಕೆ ತೆರೆ ಎಳೆಯಲಾಯಿತು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ಅಧಿಸೂಚನೆ ಹೊರಡಿಸಲು ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಡಿಸಿಪಿ ಸೀಮಾ ಲಾಟ್ಕರ್, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು

ಪೀರನವಾಡಿಯಲ್ಲಿ ಮರುಪ್ರತಿಷ್ಠಾಪನೆ ಮಾಡಲಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಅಬಕಾರಿ ಸಚಿವ ನಾಗೇಶ್ ಅವರು ಶನಿವಾರ ಮಾಲಾರ್ಪಣೆ ಮಾಡಿದರು. ಇದಕ್ಕೂ ಮೊದಲು ಇಲ್ಲಿನ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು. ವಿಧಾನಸಭೆಯ ಉಪಾಧ್ಯಕ್ಷ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉಪಸ್ಥಿತರಿದ್ದರು.

ಶಿವಾಜಿ–ರಾಯಣ್ಣ ಇಬ್ಬರೂ ರಾಷ್ಟ್ರ ಪುರುಷರು

ಶಿವಾಜಿ–ರಾಯಣ್ಣ ಇಬ್ಬರೂ ರಾಷ್ಟ್ರಪುರುಷರಾಗಿದ್ದು ಅವರನ್ನು ಜಾತಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ನಾವು ಇಬ್ಬರಿಗೂ ಗೌರವ ಕೊಡುತ್ತೇವೆ. ಅವರ ಅಭಿಮಾನಿಗಳು ಶಾಂತಿ ಕಾಪಾಡಲು ಸಂಪೂರ್ಣವಾಗಿ ಸಹಕಾರ ನೀಡಿದ್ದರಿಂದ ಸಮಸ್ಯೆ ಇತ್ಯರ್ಥಗೊಳಿಸಲು ಸಾಧ್ಯವಾಯಿತು. ರಾಯಣ್ಣ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವ ಕುರಿತು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ರಾಯಣ್ಣನ ಮೂರ್ತಿಯನ್ನು ಅಧಿಕೃತಗೊಳಿಸುವ ಕುರಿತು ಜಿಲ್ಲಾಧಿಕಾರಿ ಸರಕಾರಕ್ಕೆ ಪ್ರಸ್ತಾವ ಕಳುಹಿಸುತ್ತಾರೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ.

-ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ರಾಯಣ್ಣ ಸಮಾಧಿಗೆ ಭೇಟಿ

ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ಸ್ಥಳಕ್ಕೆ ಸಚಿವರಾದ ರಮೇಶ ಜಾರಕಿಹೊಳಿ ಮತ್ತು ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದರು. ಅಲ್ಲಿರುವ ಹನುಮಂತನ ಮೂರ್ತಿಗೆ ಮತ್ತು ನಂದಗಡ ಗ್ರಾಮದ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ರಾಯಣ್ಣ ಸಮಾಧಿ ಸ್ಥಳಕ್ಕೂ ಭೇಟಿ ನೀಡಿ ನಮನ ಸಲ್ಲಿಸಿದರು.

ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು- ಈಶ್ವರಪ್ಪ

ಪೀರನವಾಡಿಯಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನನ್ನೊಂದಿಗೆ ತಿಳಿಸಿದ್ದಾರೆ. ಯಾರ್ಯಾರ ಮೇಲೆ ಪ್ರಕರಣವಿದೆಯೋ ಅವೆಲ್ಲವನ್ನೂ ವಾಪಸ್ ಪಡೆಯಲಾಗುವುದು. ಪ್ರತಿಮೆ ವಿವಾದ ಇಷ್ಟು ಸುಲಭವಾಗಿ ಇತ್ಯರ್ಥ ಆಗುತ್ತದೆ ಮತ್ತು ಸಂಘರ್ಷಗಳಿಲ್ಲದೆ ಮಹಾನಾಯಕರಿಗೆ ಗೌರವ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಶಿವಾಜಿ ಹಾಗೂ ರಾಯಣ್ಣ ಹೋರಾಟ ಸ್ಮರಣೀಯ. ಇಬ್ಬರೂ ಮಹಾಪುರುಷರು ದೇಶಕ್ಕಾಗಿ ಹೋರಾಡಿದವರು. ಕನ್ನಡಿಗರು–ಮರಾಠಿಗರು ಹಾಗೂ ಮಹಾರಾಷ್ಟ್ರ ಮತ್ತು ಕರ್ನಾಟಕ ಎನ್ನುವ ಪ್ರಶ್ನೆ ಇಲ್ಲ. ಇಲ್ಲಿಯ ಜನ ಎಲ್ಲವನ್ನೂ ಮೀರಿ ರಾಷ್ಟ್ರೀಯತೆಯ ದಿಕ್ಕಿನಲ್ಲಿ ನಿರ್ಧಾರ ಮಾಡಿದ್ದಾರೆ.

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News