ನಿಮ್ಮಂತಹ ಸಚಿವರು ಇರುವುದೇ ನಮ್ಮ ದೇಶದ ದುರಂತ: ಸೀತಾರಾಮನ್‍ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ

Update: 2020-08-29 14:40 GMT

ಬೆಂಗಳೂರು, ಆ.29: ರಾಜ್ಯ ಸರಕಾರಗಳಿಗೆ ಆರ್‍ಬಿಐನಿಂದ ಸಾಲ ಮಾಡಿ ಎಂದು ಸಲಹೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದ್ಯಾವ ಸೀಮೆಯ ಆರ್ಥಿಕ ನೀತಿ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಿರ್ಮಲಾ ಸೀತಾರಾಮನ್ ಅವರೇ ನಿಮ್ಮ ಸರಕಾರ ರಾಜ್ಯಕ್ಕೆ ಬರಬೇಕಾಗಿದ್ದ 13,700 ಕೋಟಿ ಬಾಕಿಯನ್ನು ಇನ್ನೂ ಕೊಟ್ಟಿಲ್ಲ. ಬಾಕಿ ಹಣ ಪಾವತಿಸದೆ, ನ್ಯಾಯಯುತವಾಗಿ ಸಿಗಬೇಕಾದ ಪಾಲು ಕೊಡದೆ, ಸಾಲ ಮಾಡಿ ಎನ್ನುವ ನಿಮ್ಮಂತ ಅರ್ಥ ಸಚಿವರು ನಮ್ಮ ದೇಶದ ದೌರ್ಭಾಗ್ಯವಲ್ಲದೆ ಮತ್ತೇನು? ಎಂದು ಕಿಡಿಕಾರಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರೇ ಇದ್ಯಾವ ಸೀಮೆಯ ಆರ್ಥಿಕ ನೀತಿ. ಜಿಎಸ್‍ಟಿ ಮೂಲಕ ಸಂಗ್ರಹವಾದ ದುಡ್ಡಿನಲ್ಲಿ ಆಯಾ ರಾಜ್ಯಗಳಿಗೆ ಪಾಲು ಕೊಡಬೇಕೆಂದು ಜಿಎಸ್‍ಟಿ ಕಾಯ್ದೆಯಲ್ಲೇ ಇಲ್ಲವೆ? ನಮಗೆ ಬರಬೇಕಾದ ಪಾಲು ಬಿಟ್ಟು ನಾವು ಸಾಲಕ್ಕಾಗಿ ಆರ್‍ಬಿಐ ಕೈ ಕಾಲು ಹಿಡಿಯಬೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಪಾಲಿನ ಜಿಎಸ್‍ಟಿ ಮೊತ್ತ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರಕಾರ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕುತ್ತಿದ್ದು, ನಿನ್ನೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸುದೀರ್ಘ ಮಾಧ್ಯಮ ಪ್ರಕಟಣೆ ಹೊರಡಿಸುವ ಜೊತೆಗೆ ಕೇಂದ್ರದ ನಿಲುವನ್ನು ಖಂಡಿಸಿದ್ದರು. ಇದೀಗ ದಿನೇಶ್ ಗುಂಡೂರಾವ್ ಕೂಡ ಕೇಂದ್ರದ ವಿರುದ್ಧ ಗುಡುಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News