ಕೆಟ್ಟ ಸರಕಾರ ಕೇಂದ್ರದಲ್ಲಿದ್ದರೆ, ಪ್ರಶ್ನಿಸುವ ಧೈರ್ಯವಿಲ್ಲದ ಹೇಡಿ ಸರಕಾರ ರಾಜ್ಯದಲ್ಲಿದೆ: ಸಿದ್ದರಾಮಯ್ಯ

Update: 2020-08-29 14:41 GMT

ಬೆಂಗಳೂರು, ಆ. 29: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವರನ್ನು ಭೇಟಿ ಮಾಡಿ ಮನವಿ ನೀಡಿ, ಪ್ರಧಾನಿಗಳ ಮನವೊಲಿಕೆ ಮಾಡಿ ಪರಿಹಾರದ ಹಣ ಸಿಗುವವರೆಗೂ ಹಿಡಿದ ಕಾರ್ಯದಿಂದ ಹಿಂದೆ ಸರಿಯಬಾರದು. ನಮ್ಮ ಸರಕಾರವಿದ್ದಾಗ ಪದೇ ಪದೇ ಪ್ರಧಾನಿ ಭೇಟಿ ಮಾಡಿ ಮನವಿ ಕೊಟ್ಟು ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದೆವು, ಆದರೆ, ಇವರು ಪ್ರಧಾನಿಗಳನ್ನು ಭೇಟಿ ಮಾಡಲು ಹೆದರುತ್ತಾರೆ. ಇದೊಂದು ಮಹಾ ಪುಕ್ಕಲು ಮತ್ತು ಪ್ರಶ್ನಿಸುವ ಧೈರ್ಯವಿಲ್ಲದ ಹೇಡಿ ಸರಕಾರ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಶನಿವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ವರ್ಷವೂ ಪ್ರವಾಹ ಬಂದಿದ್ದು 56 ತಾಲೂಕುಗಳ 1 ಸಾವಿರ ಹಳ್ಳಿಗಳು ಪ್ರವಾಹದಿಂದ ಬಾಧಿಸಲ್ಪಟ್ಟಿದೆ. ಸುಮಾರು 1 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ, ಮನೆಗಳು ಕುಸಿದುಬಿದ್ದಿವೆ, ಜಾನುವಾರುಗಳು ಸಾವಿಗೀಡಾಗಿವೆ. ರಾಜ್ಯ ಸರಕಾರವೇ ಸುಮಾರು 4 ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದಿದೆ. ಈ ಹಿಂದೆಯೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ. 35 ಸಾವಿರ ಕೋಟಿ ರೂ.ಪರಿಹಾರ ಕೇಳಿದ್ದರೆ ಬರೀ 1,800 ಕೋಟಿ ರೂ.ಪರಿಹಾರ ನೀಡಲಾಗಿದೆ. ಇನ್ನು ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಟ್ಟಿಲ್ಲ, ಹಳ್ಳಿಗಳ ಸ್ಥಳಾಂತರವಾಗಿಲ್ಲ, ಶಾಲೆಗಳ ಪುನರ್ ನಿರ್ಮಾಣ ಕಾರ್ಯವೂ ಆಗಿಲ್ಲ, ಮತ್ತೆ ಈ ವರ್ಷವೂ ಪ್ರವಾಹ ಬಂದಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಹೆಲಿಕಾಪ್ಟರ್ ಮೂಲಕ ಸರ್ವೇ ಮಾಡಿದರು. ಆದರೆ ಸರಕಾರದ ಬೇರೆ ಮಂತ್ರಿಗಳು ಜನರ ಬಳಿಗೆ ಹೋಗಿ ಅವರ ಕಷ್ಟ ಆಲಿಸಬೇಕೋ ಬೇಡವೋ? ಕಂದಾಯ ಸಚಿವ ಆರ್.ಅಶೋಕ್ `ಕೇಂದ್ರದಿಂದ ಪರಿಹಾರ ಕೇಳಿದ್ದೇವೆ, ಅವರ ತಂಡ ಬಂದು ಸರ್ವೇ ಮಾಡಿ ಪರಿಹಾರ ನೀಡುತ್ತದೆ' ಎನ್ನುತ್ತಾರೆ. ಆದರೆ, ಅಧಿಕಾರಗಳ ಮಾತೇ ಬೇರೆ ಎಂದು ಟೀಕಿಸಿದರು.

ಅಧಿವೇಶನದಲ್ಲಿ ಪ್ರಶ್ನೆ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವುದರಲ್ಲಿ ಈ ಸರಕಾರ ಎಡವಿದೆ. ತಕ್ಷಣ ಪ್ರವಾಹ ಪೀಡಿತ ಪ್ರದೇಶಗಳ ಸರ್ವೇ ನಡೆಸಿ, ನಷ್ಟದ ಪ್ರಮಾಣದ ವರದಿ ತರಿಸಿಕೊಂಡು ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡುತ್ತೇನೆ. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಶ್ನಿಸಿದರೆ ಸರಿಯಾಗಿ ಉತ್ತರ ನೀಡುವುದಿಲ್ಲ. ಕಳೆದ ಬಾರಿ ಹೀಗೆ ಆಯಿತು. ನಾನು ಸರಕಾರವನ್ನು ಪ್ರಶ್ನಿಸಿದರೆ ನನ್ನ ಮಾತನ್ನು ಕೇಳಿಸಿಕೊಳ್ಳಲು ಸರಕಾರ ಸಿದ್ಧವಿರಲಿಲ್ಲ. ಈ ಬಾರಿಯ ಅಧಿವೇಶನದಲ್ಲೂ ಈ ವಿಚಾರವನ್ನು ಪ್ರಶ್ನಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹೇಡಿ ಸರಕಾರ: ಜಿಡಿಪಿ ನೆಲಕಚ್ಚಿದೆ, ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ, ಹೀಗಿರುವಾಗ ಮತ್ತೆ ರಾಜ್ಯ ಸರಕಾರ ಸಂಬಳ ನೀಡಲು ಸಾಲ ಪಡೆದುಕೊಂಡರೆ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ನಮ್ಮ ಆಡಳಿತಾವಧಿಯಲ್ಲಿ ಆರ್ಥಿಕ ಶಿಸ್ತು ಅತ್ಯುತ್ತಮವಾಗಿ ನಿರ್ವಹಣೆಯಾಗಿತ್ತು. ಸಾಲದ ಪ್ರಮಾಣ ಜಿಡಿಪಿ ಶೇ.25ಕ್ಕಿಂತಲೂ ಕಡಿಮೆಯಿತ್ತು. ಈಗ ಸಾಲ ಅನಿಯಂತ್ರಿತವಾಗಿ ಜಾಸ್ತಿಯಾಗುವುದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿ, ಅಭಿವೃದ್ಧಿಯಲ್ಲಿ 10 ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕು. ರಾಜ್ಯಗಳಿಗೆ ನೀವೇ ಸಾಲ ತೆಗೆದುಕೊಳ್ಳಿ ಎಂದು ಹೇಳುವುದೇ ವಿಪರ್ಯಾಸ. ರಾಜ್ಯಗಳ ಬಗ್ಗೆ ಕಾಳಜಿಯೇ ಇಲ್ಲದಿರುವ ಅತ್ಯಂತ ಕೆಟ್ಟ ಸರಕಾರ ಕೇಂದ್ರದಲ್ಲಿದ್ದರೆ, ಅದನ್ನು ಪ್ರಶ್ನಿಸುವ ಧೈರ್ಯವಿಲ್ಲದ ಹೇಡಿ ಸರಕಾರ ರಾಜ್ಯದಲ್ಲಿದೆ. ಬಿಜೆಪಿಯೇತರ ರಾಜ್ಯ ಸರಕಾರಗಳು ಕೇಂದ್ರದ ಈ ನೀತಿಯನ್ನು ವಿರೋಧ ಮಾಡಿವೆ. ಆದರೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ದೇವರ ಆಟ ಎಂದು ಕೈಚೆಲ್ಲಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಾಸಿಯಾಗದ ಕಾಯಿಲೆ ಏನಲ್ಲ: ಕೊರೋನ ಸೋಂಕಿನಿಂದ ನಾನು ಸಂಪೂರ್ಣ ಗುಣಮುಖನಾಗಿದ್ದು, ಮುಂದಿನ ವಾರ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದೇನೆ. ಕೊರೋನ ಸೋಂಕಿಗೆ ಒಳಗಾಗಿದ್ದ ನಾನು ಇದೀಗ ಸಂಪೂರ್ಣ ಗುಣಮುಖನಾಗಿದ್ದೇನೆ. ಕೊರೋನ ವಾಸಿಯಾಗದ ಕಾಯಿಲೆ ಏನಲ್ಲ. ಆದರೆ, ಮುಂಜಾಗ್ರತೆ ವಹಿಸುವುದು ಅವಶ್ಯ. ಮಾಸ್ಕ್ ಮತ್ತು ಸ್ಯಾನಿಟೈಸನ್ ಕಡ್ಡಾಯವಾಗಿ ಬಳಸಬೇಕು. ವೈದ್ಯರ ಸಲಹೆ ಮೇರೆಗೆ ನಾನು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದೆ. ಇಂದಿನಿಂದ ಎಂದಿನಂತೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರಕಾರವಿದ್ದರೆ ಸ್ವರ್ಗ ಸೃಷ್ಟಿ ಮಾಡುತ್ತೇವೆಂದು ಹೇಳಿದ್ದನ್ನು ನಂಬಿದ ರಾಜ್ಯದ ಜನರು 25 ಸಂಸದರನ್ನು ಗೆಲ್ಲಿಸಿಕೊಟ್ಟಿದ್ದಾರೆ, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಜನರು ನಿಮ್ಮ ಮೇಲಿಟ್ಟಿರುವ ನಂಬಿಕೆಗೆ ಈಗ ನೀವು ಮಾಡುತ್ತಿರುವುದು ದ್ರೋಹವಲ್ಲವೇ? ರಾಜ್ಯಗಳನ್ನು ಕೇಂದ್ರ ದಿವಾಳಿಯಾಗುವತ್ತ ಕೊಂಡೊಯ್ಯುತ್ತಿದೆ. ಹಾಗಾಗಿ ಕೇಂದ್ರದ ಈ ಸಲಹೆಯನ್ನು ರಾಜ್ಯ ಸರಕಾರ ತಿರಸ್ಕರಿಸಬೇಕು. ರಾಜ್ಯ ಸರಕಾರಕ್ಕೆ ತಾಕತ್ತು(ಧಮ್) ಇದ್ದರೆ ನೀವೆ ಸಾಲ ತೆಗೆದುಕೊಂಡು ಜಿಎಸ್ಟಿ ಪರಿಹಾರ ಕೊಡಿ ಎಂದು ಕೇಳಲಿ ಮತ್ತು ಸರ್ವ ಪಕ್ಷ ನಿಯೋಗ ಕೊಂಡೊಯ್ದು ಕೇಂದ್ರದ ಮೇಲೆ ಒತ್ತಡ ಹೇರಲಿ'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News