ಮಾದಕ ವಸ್ತುಗಳು ಪತ್ತೆಯಾದಲ್ಲಿ ಶಿಕ್ಷಣ ಸಂಸ್ಥೆಗಳೇ ಹೊಣೆ: ಬಸವರಾಜ ಬೊಮ್ಮಾಯಿ ಎಚ್ಚರಿಕೆ

Update: 2020-08-29 14:43 GMT

ಹಾವೇರಿ, ಆ.29: ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾದ ಬಳಿಕ ಎಲ್ಲಾದರೂ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಹಾಸ್ಟೆಲ್ ಹಾಗೂ ಕಾಲೇಜುಗಳ ಆವರಣದಲ್ಲಿ ಮಾದಕ ವಸ್ತು ಪತ್ತೆಯಾದಲ್ಲಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡಿ, ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಸಿಬಿಯವರು 200 ಕೆ.ಜಿ.ಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ. ಮಾದಕ ದ್ರವ್ಯ ಜಾಲದ ಬಗ್ಗೆ ಕೆಲವು ಸುಳಿವುಗಳು ಸಿಕ್ಕಿವೆ. ವಿದೇಶಿಯರ ಪಾತ್ರ ಇರುವುದು ಪತ್ತೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿ, ಬೇರು ಸಮೇತ ಕಿತ್ತು ಹಾಕುತ್ತೇವೆ. ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿದ್ದರೂ ಕ್ರಮ ನಿಶ್ಚಿತ ಎಂದು ಹೇಳಿದರು.

ಸಿದ್ದರಾಮಯ್ಯಗೆ ತಿರುಗೇಟು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಜನ ಮಣ್ಣು ತಿನ್ನುತ್ತಿದ್ದರೇ ಎಂದು ಪ್ರಶ್ನಿಸಿರುವ ಬೊಮ್ಮಾಯಿ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರವಿರುವುದರಿಂದ ಅಂಥ ಪರಿಸ್ಥಿತಿ ಬರುವುದಿಲ್ಲ ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಮುತ್ಸದ್ದಿ ರಾಜಕಾರಣಿ. ಹಲವು ಬಾರಿ ಬಜೆಟ್ ಮಂಡಿಸಿರುವ ಅಪಾರವಾದ ಅನುಭವವಿದೆ. ಜಿಎಸ್‍ಟಿಯಲ್ಲಿ ಸಮಸ್ಯೆಯುಂಟಾದರೆ ಸಲಹೆ, ಪರಿಹಾರವನ್ನು ಸೂಚಿಸಬೇಕೇ ಹೊರತು, ರಾಜಕಾರಣ ಮಾಡಬಾರದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಡೀ ದೇಶಕ್ಕೆ ಕೊರೋನ ಬಂದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲವನ್ನೂ ಸಮಗ್ರವಾಗಿ ಚರ್ಚಿಸಲಾಗಿದೆ. ರಾಜ್ಯಕ್ಕೆ ಭಾರ ಆಗದಿರುವ ಒಂದು ವ್ಯವಸ್ಥೆಯನ್ನು ಕೇಂದ್ರ ಸರಕಾರ ಸೂಚಿಸಿದ್ದು, ಇನ್ನೆರಡು ದಿನಗಳಲ್ಲಿ ಲಿಖಿತ ರೂಪದಲ್ಲಿ ಬರಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News