ಅನ್‍ಲಾಕ್-4 ಮಾರ್ಗಸೂಚಿ ಬಿಡುಗಡೆ: ಸೆ.7ರಿಂದ ಮೆಟ್ರೋ ಸಂಚಾರ, ಸೆ.21ರ ಬಳಿಕ ಸಭೆ-ಸಮಾರಂಭ

Update: 2020-08-29 16:49 GMT

ಬೆಂಗಳೂರು, ಆ. 29: ಕೊರೋನ ವೈರಸ್ ಸೋಂಕು ಪ್ರಕರಣಗಳು ಏರುತ್ತಿರುವುದರ ಬೆನ್ನಲ್ಲೆ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಮಧ್ಯೆ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅನ್‍ಲಾಕ್-4 ಮಾರ್ಗಸೂಚಿ ಬಿಡುಗಡೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೇಂದ್ರದ ಆದೇಶ ಪಾಲಿಸುವುದಾಗಿ ಪ್ರಕಟಿಸಿದ್ದು, ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡಿದೆ.

ಸೆಪ್ಟಂಬರ್ 21ರ ನಂತರ ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯ ಸಭೆ-ಸಮಾರಂಭಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಂಡು ನೂರು ಮಂದಿ ಸೇರಲು ಅವಕಾಶ ಕಲ್ಪಿಸಲಾಗಿದೆ. ಬಯಲು ರಂಗ ಮಂದಿರಗಳನ್ನು ಇದೇ ಸಂದರ್ಭದಲ್ಲಿ ತೆರೆಯಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಶಾಲೆ ಮತ್ತು ಕಾಲೇಜುಗಳು, ಈಜುಕೋಳಗಳು, ಚಿತ್ರಮಂದಿರಗಳನ್ನು ಸೆಪ್ಟಂಬರ್ 30ರ ವರೆಗೆ ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ ಎಂದು ಕೋವಿಡ್-19 ಅನ್‍ಲಾಕ್-4 ಮಾರ್ಗಸೂಚಿಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಶಾಲೆ ಮತ್ತು ಕಾಲೇಜು ಮಕ್ಕಳಿಗೆ ಆನ್‍ಲೈನ್ ತರಗತಿ ಮುಂದುವರಿಯಲಿದ್ದು, ಕಂಟೈನ್ಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ 9ರಿಂದ 12ನೆ ತರಗತಿ ವಿದ್ಯಾರ್ಥಿಗಳ ಪೋಷಕರು ಲಿಖಿತ ಅನುಮತಿ ಪಡೆದು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬಹುದು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಅನ್‍ಲಾಕ್-3 ಮಾರ್ಗಸೂಚಿಯಲ್ಲಿ ಯೋಗ ಸಂಸ್ಥೆಗಳು ಹಾಗೂ ಜಿಮ್‍ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಆದರೆ, ಕಂಟೈನ್ಮೆಂಟ್ ಝೋನ್‍ಗಳನ್ನು ನಿರ್ಬಂಧ ಮುಂದುವರಿಸಲಾಗಿತ್ತು. ಆ.31ಕ್ಕೆ ಅನ್‍ಲಾಕ್-3 ಮುಕ್ತಾಯಗೊಳ್ಳಲಿದ್ದು, ಇದೀಗ ಅನ್‍ಲಾಕ್-4 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಈ ನಿಯಮವು ಸೆ.30ರ ವರೆಗೆ ಇರಲಿದ್ದು, ಕೇಂದ್ರ ಸರಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ರಾಜ್ಯ ಸರಕಾರ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News