ಭಾರತೀಯ ತಳಿಯ ಶ್ವಾನಗಳನ್ನೇ ಆಯ್ಕೆ ಮಾಡಿ,ಭಾರತೀಯ ಗೇಮ್‌ಗಳನ್ನು ಸೃಷ್ಟಿಸಿ: ಪ್ರಧಾನಿ ಕರೆ

Update: 2020-08-30 09:47 GMT

 ಹೊಸದಿಲ್ಲಿ, ಆ.30: ಭಾರತೀಯ ತಳಿಯ ಶ್ವಾನಗಳನ್ನೇ ಆಯ್ಕೆ ಮಾಡಿ ಮನೆಗೆ ತನ್ನಿ, ವಿಶ್ವಕ್ಕಾಗಿ ಆಟಿಕೆಗಳನ್ನು ಹಾಗೂ ಕಂಪ್ಯೂಟರ್ ಹಾಗೂ ಮೊಬೈಲ್ ಗೇಮ್ಸ್ ಗಳನ್ನು ಸೃಷ್ಟಿಸುವಂತೆ ದೇಶದ ಜನತೆಯಲ್ಲಿ ವಿನಂತಿಸಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತವಾಗುವ ನಿಟ್ಟಿನಲ್ಲಿ ಮತ್ತೊಂದು ಸಲಹೆ ನೀಡಿದ್ದಾರೆ.

 ದೇಶದಲ್ಲಿ ಭದ್ರತಾ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿರುವ ಶ್ವಾನಗಳ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ, ಭಾರತೀಯ ತಳಿಯ ನಾಯಿಗಳ ಕುರಿತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ಸಂಶೋಧನೆ ನಿರತವಾಗಿದೆ ಎಂದರು.

 ಅವರ ಉದ್ದೇಶ ಭಾರತೀಯ ತಳಿಗಳನ್ನು ಉತ್ತಮ ಹಾಗೂ ಹೆಚ್ಚು ಉಪಯುಕ್ತವಾಗಿಸುವುದಾಗಿದೆ. ಮುಂದಿನ ಬಾರಿ ನೀವು ಶ್ವಾನವನ್ನು ಸಾಕಲು ಬಯಸಿದರೆ ತಮ್ಮ ಮನೆಗೆ ಭಾರತೀಯ ತಳಿಯ ಶ್ವಾನವನ್ನೇ ತನ್ನಿ. ಭಾರತದಲ್ಲಿ ಸ್ವಾವಲಂಬನೆ ಸಾಮೂಹಿಕ ಮಂತ್ರವಾದರೆ ಯಾವ ಪ್ರದೇಶವೂ ಹಿಂದುಳಿಯಲಾರದು ಎಂದು ತಿಂಗಳ ಕಾರ್ಯಕ್ರಮ ಮನ್‌ಕೀ ಬಾತ್‌ನಲ್ಲಿ ಮೋದಿ ಹೇಳಿದರು.

   ಭಾರತದಲ್ಲಿ ಸ್ಟಾರ್ಟ್‌ಅಪ್ ಆರಂಭಿಸುವಂತೆ ವಿನಂತಿಸಿದ ಪ್ರಧಾನಿ ಇಡೀ ವಿಶ್ವಕ್ಕಾಗಿ ಆಟಿಕೆಗಳನ್ನು ತಯಾರಿಸುವಂತೆ ಕರೆ ನೀಡಿದ್ದಾರೆ. ಕಂಪ್ಯೂಟರ್ ಹಾಗೂ ಮೊಬೈಲ್ ಪೋನ್‌ಗಳಲ್ಲಿ ಗೇಮ್‌ಗಳನ್ನು ದೇಶದಲ್ಲೇ ಅಭಿವೃದ್ಧಿಪಡಿಸುವಂತೆ ಯುವ ಉದ್ಯಮಿಗಳಿಗೆ ಕರೆ ನೀಡಿದ್ದರು. ಆ್ಯಪ್ ಸಂಶೋಧನಾ ಸವಾಲಿನ ಭಾಗವಾಗಿ ಸಾಕಷ್ಟು ಮೊಬೈಲ್ ಆ್ಯಪ್‌ಗಳನ್ನು ತಯಾರಿಸುವುದಕ್ಕೆ ಪ್ರಯತ್ನಿಸುತ್ತಿರುವ ಭಾರತೀಯರನ್ನು ಪ್ರಧಾನಿ ಪ್ರಶಂಶಿಸಿದರು.

"ನಾವು ಸ್ವಾತಂತ್ರ ದಿನಾಚರಣೆಯನ್ನು ಆಚರಿಸಿದಾಗ ತುಂಬಾ ಆಸಕ್ತಿಯ ಸುದ್ದಿ ನನ್ನ ಗಮನ ಸೆಳೆಯಿತು. ನಮ್ಮ ಭದ್ರತಾ ಪಡೆಯಲ್ಲಿದ್ದ ಸೋಫೀ ಹಾಗೂ ವಿಡಾ ಭಾರತೀಯ ಸೇನೆಯ ಹೆಮ್ಮೆಯ ಶ್ವಾನಗಳಾಗಿದ್ದ ಸುದ್ದಿ ನನಗೆ ತಿಳಿಯಿತು. ಇವುಗಳನ್ನು ಗೌರವಿಸುವ ಮೂಲಕ ಕರ್ತವ್ಯದಿಂದ ಬಿಡುಗಡೆಗೊಳಿಸಲಾಯಿತು.ಇಂತಹ ಹಲವು ಧೈರ್ಯಶಾಲಿ ಶ್ವಾನಗಳು ಸಶಸ್ತ್ರಪಡೆಗಳೊಂದಿಗೆ ಇದ್ದು ದೇಶಕ್ಕಾಗಿ ಜೀವಿಸುತ್ತಿವೆ ಹಾಗೂ ಪವಿತ್ರ ತ್ಯಾಗವನ್ನು ಮಾಡುತ್ತಿವೆ. ಇಂತಹ ಶ್ವಾನಗಳು ಹಲವು ಬಾಂಬ್ ಸ್ಪೋಟಗಳು ಹಾಗೂ ಭಯೋತ್ಪಾದಕ ಸಂಚುಗಳನ್ನು ತಡೆಯಲು ಪ್ರಮುಖ ಪಾತ್ರ ವಹಿಸಿವೆ. ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲೂ ಶ್ವಾನಗಳು ಮುಖ್ಯ ಪಾತ್ರವಹಿಸುತ್ತಿವೆ. ದೇಶದ ರಕ್ಷಣೆಯಲ್ಲಿ ಶ್ವಾನಗಳ ಸಂಪೂರ್ಣ ಪಾತ್ರದ ಕುರಿತ ವಿವರ ನನಗೆ ಇತ್ತೀಚೆಗೆ ತಿಳಿಯಿತು'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News