ನಾವು ಯಾರ ಕೈಗೊಂಬೆಗಳೂ ಅಲ್ಲ: ಪಾಕಿಸ್ತಾನಕ್ಕೆ ಫಾರೂಕ್ ಅಬ್ದುಲ್ಲಾ ತಿರುಗೇಟು

Update: 2020-08-30 12:02 GMT

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದತಿ ವಿರುದ್ಧ ಸಂಘಟಿತ ಹೋರಾಟ ನಡೆಸಲು ಜಮ್ಮು ಮತ್ತು ಕಾಶ್ಮೀರದ ಆರು ಪ್ರಮುಖ ರಾಜಕೀಯ ಪಕ್ಷಗಳು ಒಪ್ಪಂದ ಮಾಡಿಕೊಂಡಿರುವುದನ್ನು ಶ್ಲಾಘಿಸಿದ ಪಾಕಿಸ್ತಾನಕ್ಕೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, "ನಾವು ಯಾರ ಕೈಗೊಂಬೆಗಳೂ ಅಲ್ಲ" ಎಂದು ತಿರುಗೇಟು ನೀಡಿದ್ದಾರೆ.

"ಪಾಕಿಸ್ತಾನ ಸದಾ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖ್ಯವಾಹಿನಿ ಪಕ್ಷಗಳನ್ನು ನಿಂದಿಸುತ್ತಲೇ ಬಂದಿದೆ. ಆದರೆ ಇದೀಗ ದಿಢೀರನೇ ಅದು ನಮ್ಮನ್ನು ಇಷ್ಟಪಡುತ್ತಿದೆ" ಎಂದು ಅವರು ಹೇಳಿದರು. ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಕಾಂಗ್ರೆಸ್ ಹಾಗೂ ಇತರ ಮೂರು ಪಕ್ಷಗಳು ಮಾಡಿಕೊಂಡ ಒಪ್ಪಂದವನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಶಿ, "ಇದು ಸಾಮಾನ್ಯ ಘಟನೆ ಅಲ್ಲ; ಮಹತ್ವದ ಬೆಳವಣಿಗೆ" ಎಂದು ಹೇಳಿರುವ ಬಗ್ಗೆ ಪ್ರಶ್ನಿಸಿದಾಗ ಮೇಲಿನಂತೆ ಉತ್ತರಿಸಿದರು.

"ನಾವು ದೆಹಲಿಯ ಅಥವಾ ಗಡಿಯಾಚೆಗಿನ ಯಾರ ಕೈಗೊಂಬೆಗಳೂ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಬಯಸುತ್ತೇವೆ. ನಮ್ಮ ಉತ್ತರದಾಯಿತ್ವ ಇರುವುದು ಜಮ್ಮು ಕಾಶ್ಮೀರ ಜನತೆಗೆ. ಅವರಿಗಾಗಿ ನಾವು ಕೆಲಸ ಮಾಡುತ್ತೇವೆ" ಎಂದರು.

ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಕೇಳಿದ ಪ್ರಶ್ನೆಗೆ, "ಕಾಶ್ಮೀರಕ್ಕೆ ಸಶಸ್ತ್ರ ವ್ಯಕ್ತಿಗಳನ್ನು ಕಳುಹಿಸುವುದನ್ನು ನಿಲ್ಲಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸುತ್ತಿದ್ದೇನೆ. ರಾಜ್ಯದಲ್ಲಿ ರಕ್ತಪಾತವನ್ನು ಕೊನೆಗಾಣಿಸಲು ನಾವು ಬಯಸಿದ್ದೇವೆ. ಜಮ್ಮು ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳೂ, ಕಳೆದ ವರ್ಷದ ಆಗಸ್ಟ್ 5ರಂದು ನಮ್ಮಿಂದ ಸಂವಿಧಾನಬಾಹಿರವಾಗಿ ಕಿತ್ತುಕೊಂಡ ನಮ್ಮ ಹಕ್ಕುಗಳೂ ಸೇರಿದಂತೆ ನಮ್ಮ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ಮಾಡಲು ಬದ್ಧವಾಗಿವೆ" ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News