‘ಮನ್ ಕಿ ಬಾತ್’‍ನಲ್ಲಿ ಪ್ರಧಾನಿ ಉಲ್ಲೇಖಿಸಿದ ‘ವಿದಾ’ ಮತ್ತು ‘ಸೋಫಿ’ ಎಂಬ ಶ್ವಾನಗಳ ವಿಶೇಷತೆಯೇನು ಗೊತ್ತಾ?

Update: 2020-08-30 12:18 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 68ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವಿವಿಧ ಭದ್ರತಾ ಕಾರ್ಯಾಚರಣೆಗಳಲ್ಲಿ ಶ್ವಾನಗಳ ಪಾತ್ರದ ಬಗ್ಗೆ ಉಲ್ಲೇಖಿಸಿದ್ದಾರೆ.

ಭಾರತೀಯ ಸೇನೆಯ ಲ್ಯಾಬ್ರಡಾರ್ ವಿದಾ ಹಾಗೂ ಕೂಕರ್ ಸ್ಪೇನಿಯಲ್ ಸೋಫಿ ಬಗ್ಗೆ ಮೋದಿ ಮಾತನಾಡಿದ್ದರು. 74ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಈ ಎರಡು ಶ್ವಾನಗಳಿಗೆ ಸೇನಾ ಸಿಬ್ಬಂದಿ ಮುಖ್ಯಸ್ಥರು ‘ಶ್ಲಾಘನಾ ಪತ್ರ’ ನೀಡಿದ್ದರು.

ಸೇನೆಯ ಶ್ವಾನ ಘಟಕದ ವಿದಾ ಉತ್ತರ ಕಮಾಂಡ್ ‍ನಲ್ಲಿ ನಿಯೋಜನೆಯಲ್ಲಿದ್ದು, ಇದುವರೆಗೆ ನೆಲದಲ್ಲಿ ಹೂತಿಟ್ಟಿದ್ದ ಐದು ಮೈನ್ಸ್ ಹಾಗೂ ಒಂದು ಗ್ರೆನೇಡ್ ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಮೂಲಕ ಸೇನೆಗೆ ಆಗಬಹುದಾಗಿದ್ದ ದೊಡ್ಡ ಸಂಭಾವ್ಯ ಅನಾಹುತ ತಪ್ಪಿಸಿದೆ.

ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ ಬಾಂಬ್ ನಿಷ್ಕ್ರಿಯ ದಳದ ಸೋಫಿ, ಸ್ಫೋಟಕಗಳನ್ನು ಪತ್ತೆ ಮಾಡುವ ಶ್ವಾನವಾಗಿದ್ದು, ಐಇಡಿ ಫ್ಯಾಬ್ರಿಕೇಟ್ ಮಾಡಲು ಬಳಸಲು ಉದ್ದೇಶಿಸಿದ್ದ ಇನೀಶಿಯೇಟರ್/ಆಕ್ಸಿಲರೇಟರ್ ಪತ್ತೆ ಮಾಡಿ ಹಲವು ಜೀವಗಳನ್ನು ಉಳಿಸಿತ್ತು.

ಈ ಎರಡೂ ಶ್ವಾನಗಳ ಕ್ಷಮತೆಯನ್ನು ಹಾಡಿಹೊಗಳಿದ ಮೋದಿ, ಶ್ವಾನವನ್ನು ದತ್ತು ತೆಗೆದುಕೊಳ್ಳುವ ಯೋಜನೆ ಇದ್ದರೆ ಜನತೆ ಸ್ಥಳೀಯ ತಳಿಯ ಶ್ವಾನಗಳನ್ನು ಮನೆಗೆ ತರುವಂತೆ ಸಲಹೆ ಮಾಡಿದ್ದರು.

ಸೇನೆಯ ಶ್ವಾನಘಟಕವನ್ನು "ನಿಶ್ಶಬ್ದ ಯೋಧರು" ಎಂದು ಕರೆಯಲಾಗುತ್ತಿದ್ದು, ಭದ್ರತಾ ಪಡೆಗಳಿಗೆ ಎಚ್ಚರ ನೀಡುವ ಕಾರ್ಯವನ್ನು ಇದು ಮಾಡುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News