ಲಾಕ್‍ಡೌನ್ ನಿಂದ ಆರ್ಥಿಕ ಸಂಕಷ್ಟ: 11 ಸಾವಿರ ರೂ. ಗೆ ತನ್ನ ಮಗುವನ್ನೇ ಮಾರಿದ ಮಹಿಳೆ

Update: 2020-08-30 12:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 30: ಲಾಕ್‍ಡೌನ್ ಪರಿಣಾಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಹಿಯೊಬ್ಬರು, ತನ್ನ ಮಗುವನ್ನು 11 ಸಾವಿರ ರೂ.ಗಳಿಗೆ ಮಾರಾಟ ಮಾಡಿರುವ ಆರೋಪವೊಂದು ಕೇಳಿಬಂದಿದೆ.

ಇಲ್ಲಿನ ನೆಲಮಂಗಲದ ರೇಣುಕಾನಗರದ ನಿವಾಸಿ ನಾಗಲಕ್ಷ್ಮಮ್ಮ ಎಂಬಾಕೆಗೆ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದು, ಪತಿ ಇಲ್ಲದ ಕಾರಣ ಆಕೆಯೇ ಹೋಟೆಲ್‍ವೊಂದರಲ್ಲಿ ಕೆಲಸಕ್ಕೆ ಸೇರಿ ಜೀವನ ಸಾಗಿಸುತ್ತಿದ್ದಳು. ಆದರೆ, ಲಾಕ್‍ಡೌನ್‍ನಿಂದ ದಿಢೀರ್ ಹೋಟೆಲ್ ಬಂದ್ ಆದ ಪರಿಣಾಮ ಆಕೆಗೆ ಹಣದ ಕೊರತೆ ಉಂಟಾಗಿದ್ದು, ಮನೆಯ ಬಾಡಿಗೆಯನ್ನೂ ಕಟ್ಟಲಾಗದೆ ಕಂಗೆಟ್ಟು ಹೋಗಿದ್ದರು. ಈ ವೇಳೆ ನಾಗಲಕ್ಷಮ್ಮ ಮನೆಯ ಪಕ್ಕದ ನಿವಾಸಿ ಸಂಗೀತಾ ಎಂಬವರು 3 ವರ್ಷದ ಹೆಣ್ಣು ಮಗುವನ್ನು ಮಾರಾಟ ಮಾಡುವಂತೆ ಪ್ರಚೋದನೆ ನೀಡಿದ್ದಾರೆ ಎನ್ನಲಾಗಿದೆ.

ತದನಂತರ, ತುಮಕೂರು ಮೂಲದ ಕೃಷ್ಣಮೂರ್ತಿ ಎಂಬಾತನಿಗೆ 11 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಅಲ್ಲದೆ, ದತ್ತು ಪಡೆದ ಮಾದರಿಯಲ್ಲಿ 50 ರೂ.ಬಾಂಡ್ ಪೇಪರ್ ನಲ್ಲಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಕೆಲ ದಿನಗಳಿಂದ ತಾಯಿಯು ಮಗುವನ್ನು ನೋಡಲು ಪ್ರಯತ್ನಿಸಿದ್ದು, ಆದರೆ ಕೃಷ್ಣಮೂರ್ತಿ ಮಗುವನ್ನು ನೋಡಲು ನಿರಾಕರಿಸಿದ್ದಾನೆ. ಹೀಗಾಗಿ ನಾಗಲಕ್ಷಮ್ಮ ನೆಲಮಂಗಲ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ವೃತ್ತ ನಿರೀಕ್ಷಕ ಶಿವಣ್ಣ, ಮಗು ದತ್ತು ಪಡೆದ ಕೃಷ್ಣಮೂರ್ತಿಯನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಬಳಿಕ 3 ವರ್ಷದ ಹೆಣ್ಣು ಮಗುವನ್ನು ತಾಯಿ ಮಡಿಲು ಸೇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News