ದಿಲ್ಲಿ ಹಿಂಸಾಚಾರ ಪ್ರಕರಣ: ದೇವಾಂಗನಾ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ವಜಾ

Update: 2020-08-30 14:02 GMT

ಹೊಸದಿಲ್ಲಿ,ಆ.30: ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ‘ಪಿಂಜ್ರಾ ತೋಡ್’ ಮಹಿಳಾ ಸಂಘಟನೆಯ ಕಾರ್ಯಕರ್ತೆ ಹಾಗೂ ಜೆಎನ್‌ಯು ವಿದ್ಯಾರ್ಥಿನಿ ದೇವಾಂಗನಾ ಕಲಿಟಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಮತ್ತೆ ವಜಾಗೊಳಿಸಿದೆ. ಪ್ರಕರಣದ ವಿಚಾರಣೆ ಇನ್ನೂ ಬಾಕಿಯಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಕಲಿಟಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆ.28ರಂದು ತಿರಸ್ಕರಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು,ಪ್ರತಿಭಟಿಸಲು ಮತ್ತು ಕಾನೂನನ್ನು ವಿರೋಧಿಸಲು ಕಲಿಟಾಗೆ ಸ್ವಾತಂತ್ರ್ಯವಿದೆಯಾದರೂ ಅವರ ಹಕ್ಕು ನ್ಯಾಯಯುತ ನಿರ್ಬಂಧಗಳಿಗೊಳಪಟ್ಟಿದೆ ಎಂದು ಹೇಳಿದ್ದರು. ಕಲಿಟಾ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ನಿಜವಾಗಿರುವಂತೆ ಕಂಡುಬರುತ್ತಿವೆ ಎಂದು ಅವರು ಬೆಟ್ಟು ಮಾಡಿದ್ದರು. ಮೇ ತಿಂಗಳಿನಲ್ಲಿ ಕಲಿಟಾರನ್ನು ಬಂಧಿಸಿರುವ ದಿಲ್ಲಿ ಪೊಲೀಸರು ಅವರ ವಿರುದ್ಧ ದಂಗೆ,ಅಕ್ರಮ ಕೂಟ ಮತ್ತು ಕೊಲೆಯತ್ನ ಆರೋಪಗಳನ್ನು ಹೊರಿಸಿದ್ದಾರೆ. ದಂಗೆಗಳಲ್ಲಿ ಪೂರ್ವಯೋಜಿತ ಸಂಚೊಂದರ ಭಾಗವಾಗಿರುವ ಆರೋಪದಲ್ಲಿ ಪ್ರತ್ಯೇಕ ಪ್ರಕರಣವೊಂದರಲ್ಲಿ ಕಲಿತಾ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆಯನ್ನೂ ಹೇರಲಾಗಿದೆ.

ಪ್ರಕರಣದಲ್ಲಿಯ ಸಾಕ್ಷಿಗಳು ನೀಡಿರುವ ಹೇಳಿಕೆಗಳು ಸಿಎಎ ವಿರೋಧಿ ಪ್ರತಿಭಟನೆಗಳ ಯೋಜಿತ ಚಟುವಟಿಕೆಗಳಲ್ಲಿ ಕಲಿಟಾರ ಪಾತ್ರವನ್ನು ಸ್ಪಷ್ಟವಾಗಿ ಬಿಂಬಿಸಿವೆ ಮತ್ತು ಈ ಚಟುವಟಿಕೆಗಳು ಹಿಂಸೆಗೆ ಕಾರಣವಾಗಿದ್ದವು ಎನ್ನುವುದನ್ನು ಬೆಟ್ಟು ಮಾಡಿವೆ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News