8ನೆ ತರಗತಿಯಿಂದಲೇ ಯುಪಿಎಸ್ ಸಿಗೆ ತರಬೇತಿ: ಬೀದರ್ ಶಾಹೀನ್ ಶಿಕ್ಷಣ ಸಂಸ್ಥೆಯ ವಿಶೇಷ ಯೋಜನೆ

Update: 2020-08-30 15:41 GMT

ಬೆಂಗಳೂರು: ನೂತನ ಶಿಕ್ಷಣ ನೀತಿ 2020 ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಹಲವಾರು ಮಹತ್ತರ ಬದಲಾವಣೆಗಳಿಗೆ ನಾಂದಿ ಹಾಡಲಿದ್ದು, ಈ ನಿಟ್ಟಿನಲ್ಲಿ ಭವಿಷ್ಯದ ಸ್ಪರ್ಧಾತ್ಮಕ ಕೌಶಲಗಳಿಗೆ ಸೆಕೆಂಡರಿ ಲೆವೆಲ್ (ನೂತನ ಶಿಕ್ಷಣ ನೀತಿಯ ಪ್ರಕಾರ 9ನೆ ತರಗತಿಯ ನಂತರದ) ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ನೀತಿ, ಶೈಲಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ವ್ಯವಸ್ಥೆಗೆ ಶಾಹೀನ್ ಶಿಕ್ಷಣ ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಸಾಂಪ್ರದಾಯಿಕ ಶೈಲಿಯಿಂದ ಹೊರತಾದ ಕೌಶಲಯುಕ್ತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಯೋಜನೆ ‘ಶಾಹೀನ್ ಇಂಟಿಗ್ರೇಟೆಡ್ ಸಿವಿಲ್ ಸರ್ವಿಸಸ್ ರೆಸಿಡೆನ್ಶಿಯಲ್ ಪ್ರೋಗ್ರಾಂ’ ಅನ್ನು ಸಂಸ್ಥೆಯು ಜಾರಿಗೊಳಿಸಲಿದೆ.

ಈ ಯೋಜನೆಯಡಿ ನೀಟ್, ಜೆಇಇ, ಐಎಎಸ್,  ಐಪಿಎಸ್, ಸಿಎ, ಸಿಎಸ್, ಸಿಎಲ್ ಎಟಿ, ಸಿಎಟಿ, ಎನ್ ಟಿಎಸ್ ಇ, ಕೆಎಎಸ್ ಇತ್ಯಾದಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ನಾಗರಿಕ ಸೇವೆಯಲ್ಲಿರುವ ಪ್ರಮುಖರು ಮತ್ತು ಭಾರತದ ಪ್ರಮುಖ ತಜ್ಞರು ತಯಾರಿಸಿದ ಮೂರು ಹಂತಗಳ ಯೋಜನೆಯನ್ನು ಶಾಹೀನ್ ಸಂಸ್ಥೆಯು ಕಾರ್ಯಗತಗೊಳಿಸಲಿದೆ ಎಂದವರು ಮಾಹಿತಿ ನೀಡಿದ್ದಾರೆ.

ಈ ಯೋಜನೆಯ ಪ್ರಮುಖಾಂಶಗಳು ಹೀಗಿವೆ.

ಪೂರ್ವ ಸಿದ್ಧತಾ ಹಂತ (8ನೆ ತರಗತಿ): 8ನೆ ತರಗತಿಯಲ್ಲಿರುವ ಒಂದು ವರ್ಷದ ಕೋರ್ಸ್. 6ರಿಂದ 8ನೆ ತರಗತಿವರೆಗಿನ ಎನ್ ಸಿಆರ್ ಟಿ ಪಠ್ಯದ ಮೂಲಭೂತ ವಿಷಯಗಳ ಬಗ್ಗೆ ತರಬೇತಿ

ಪ್ರಾಥಮಿಕ ಹಂತ (9ನೆ ಮತ್ತು 10ನೆ): 6ರಿಂದ 10ನೆ ತರಗತಿವರೆಗಿನ ಎನ್ ಸಿಆರ್ ಟಿ ಪಠ್ಯದ ಮೂಲಭೂತ ವಿಷಯಗಳ ಜೊತೆಗೆ ಅಂಕಗಣಿತ, ಜ್ಞಾನಶಾಸ್ತ್ರ, ಕಾಂಪಿಟಿಟಿವ್ ಇಂಗ್ಲಿಷ್ ಮತ್ತು ಸಾಮಾನ್ಯ ಜಾಗೃತಿ ಬಗ್ಗೆ ತರಬೇತಿ.

ಮುಂದುವರಿದ ಹಂತ (11ನೆ ಮತ್ತು 12ನೆ ಕಲಾ ಮತ್ತು ವಾಣಿಜ್ಯ); 6ರಿಂದ 12ನೆ ತರಗತಿವರೆಗಿನ ಮೂಲಭೂತ ವಿಷಯಗಳ ಜೊತೆ ಅಂಕಗಣಿತ, ಜ್ಞಾನಶಾಸ್ತ್ರ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲಗಳು, ಚರ್ಚೆ, ಗುಂಪು ಚರ್ಚೆ, ಕಾಂಪಿಟಿಟಿವ್ ಇಂಗ್ಲಿಷ್ ಮತ್ತು ಸಾಮಾನ್ಯ ಜಾಗೃತಿ ಬಗ್ಗೆ ತರಬೇತಿ, 11ನೆ ತರಗತಿಯಿಂದ ದಾಖಲಾತಿ ನಡೆಯಲಿದ್ದು, ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿಎ ತರಬೇತಿಯನ್ನು ನೀಡಲಾಗುವುದು.

ವೃತ್ತಿಪರ ಹಂತ (ಬಿಎ, ಬಿಎಸ್ಸಿ, ಬಿ ಕಾಂ): ಐಎಎಸ್, ಐಪಿಎಸ್, ಐಎಫ್ ಎಸ್, ಪಿಸಿಎಸ್, ಸಿಎಟಿ, ಸಿಎಲ್ ಎಟಿ, ಜಿಎಂಎಟಿ, ಸಿಎಪಿಎಫ್,  ಬ್ಯಾಂಕ್ ಪಿಒ, ಎಸ್ಎಸ್ ಸಿ, ಕೆಎಎಸ್ ಇತ್ಯಾದಿಗಳಿಗೆ ಮೂರು ವರ್ಷಗಳ ತರಬೇತಿ ಯೋಜನೆ ಇದಾಗಿದೆ. ಸಂದರ್ಶನ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಎಲ್ಲಾ ರೀತಿಯ ವಿಷಯಗಳನ್ನು ಈ ಯೋಜನೆ ಒಳಗೊಂಡಿದ್ದು, ಬಿಕಾಂ ವಿದ್ಯಾರ್ಥಿಗಳಿಗೆ ಸಿಎ ತರಬೇತಿಯನ್ನು ನೀಡಲಾಗುವುದು.

ಪದವಿ ನಂತರ ಯುಪಿಎಸ್ ಸಿಗೆ ಒಂದು ವರ್ಷದ ಕೋರ್ಸ್ ಇದ್ದು, ಸಿಎಸ್ ಎಟಿ, ಪ್ರಿ, ಮೈನ್ಸ್ ಮತ್ತು ಸಂದರ್ಶನ ಸೇರಿ ಪರೀಕ್ಷೆಯ ಎಲ್ಲಾ ವಿಷಯಗಳನ್ನು ಒಳಗೊಂಡಿದೆ. ಆನ್ ಲೈನ್ ಮತ್ತು ಆಫ್ ಲೈನ್ ಮಾದರಿಯಲ್ಲಿ ಈ ಕೋರ್ಸ್ ಲಭ್ಯವಿದೆ.

ಎಥಿಕ್ಸ್ ಕೇಸ್ ಸ್ಟಡೀಸ್, ಪ್ರಬಂಧ ಅಭ್ಯಾಸ, ಬರವಣಿಗೆ ಕೌಶಲಗಳು, ಸಮಯ-ನಿರ್ವಹಣಾ ಕೌಶಲ, ಎನ್‌ಎಲ್‌ಪಿ, ಸಮಕಾಲೀನ ಸಮಸ್ಯೆಗಳ ವಿಶ್ಲೇಷಣಾತ್ಮಕ ವರದಿ, ಒತ್ತಡ ನಿರ್ವಹಣೆ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ಅತ್ಯುತ್ತಮ ಮಟ್ಟದ ಬೋಧಕ ವೃಂದ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಗಳಿಸಿರುವ ತಜ್ಞರು ತರಬೇತಿ ನೀಡಲಿದ್ದಾರೆ.

ಎನ್ ಟಿಎಸ್ ಇ, ಎನ್ ಡಿಎ, ಸಿಡಿಎಸ್, ಎಸ್ಎಸ್ ಸಿ, ಬ್ಯಾಂಕ್ , ರೈಲ್ವೆ, ಯುಪಿಎಸ್ ಸಿ, ಪಿಎಸ್ ಸಿ, ಸಿಎ, ಸಿಎಸ್, ಸಿಎಲ್ ಎಟಿ, ಸಿಎಟಿ, ಎಂಎಟಿ, ಟಿಒಇಎಫ್ ಎಲ್, ಜಿಎಂಎಟಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ನಾಗರಿಕ ಸೇವಾ ಕ್ಷೇತ್ರದ ಪ್ರಮುಖರು ಮತ್ತು ಭಾರತದ ಪ್ರತಿಷ್ಟಿತ ತಜ್ಞರ ತಂಡ ರೂಪಿಸಿದ ಕೋರ್ಸ್ ಕಂಟೆಂಟ್ ಗಳು ವಿದ್ಯಾರ್ಥಿಗಳಿಗೆ ಲಭಿಸಲಿದೆ.

ನಿಯಮಿತ ಪ್ರದರ್ಶನದ ಆಧಾರದಲ್ಲಿ ಅಭ್ಯರ್ಥಿಗಳ ಮೌಲ್ಯಮಾಪನ ನಡೆಸಲಾಗುವುದು. ಕಲಿಕೆಗೆ ಸಕಾರಾತ್ಮಕ ಪರಿಸರ ವ್ಯವಸ್ಥೆಗಾಗಿ ಸೃಜನಶೀಲ ಕ್ಯಾಂಪಸ್ ಇರಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗಲು ವಿಷಯಗಳನುಸಾರ ವಾರಕ್ಕೊಮ್ಮೆ ಪರೀಕ್ಷೆ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ 4 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95 ಮತ್ತು ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಬೀದರ್ ನ ಶಾಹೀನ್ ಕಾಲೇಜು ಉಚಿತ ಶಿಕ್ಷಣ ನೀಡಲಿದೆ. ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಸಂಸ್ಥೆಯ ಕಾಲೇಜು ಇಲ್ಲದಿರುವ ಕಾರಣ ಈ ಭಾಗದ ವಿದ್ಯಾರ್ಥಿಗಳಿಗೆ ಬೀದರ್ ನಲ್ಲೇ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ 327 ಸರಕಾರಿ ಕೋಟಾದ ವೈದ್ಯಕೀಯ ಸೀಟುಗಳನ್ನು ಶಾಹೀನ್ ಕಾಲೇಜು ಗಳಿಸಿದೆ. ದೇಶದ ಒಟ್ಟು ಸರಕಾರಿ ಕೋಟಾದ ವೈದ್ಯಕೀಯ ಸೀಟುಗಳಲ್ಲಿ 0.6  ಶೇಕಡಾದಷ್ಟು ಸೀಟುಗಳನ್ನು ಶಾಹೀನ್ ಸಂಸ್ಥೆಯ ವಿದ್ಯಾರ್ಥಿಗಳು ಗಳಿಸಿದ್ದಾರೆ. ಈ ಬಾರಿ ಕೆ-ಸೆಟ್ ನಲ್ಲಿ ಕೂಡ ಟಾಪ್ 50 ರ್ಯಾಂಕ್ ಗಳಲ್ಲಿ 5 ಶ್ರೇಣಿಗಳನ್ನು ಶಾಹೀನ್ ಶಿಕ್ಷಣ ಸಂಸ್ಥೆ ಗಳಿಸಿದೆ ಎಂದವರು ಮಾಹಿತಿ ನೀಡಿದ್ದಾರೆ.

ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಸಂಸ್ಥೆಯು ನಿರ್ಧರಿಸಿದ್ದು, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ. ಮತ್ತು ಯು.ಪಿ.ಎ.ಎಸ್ಸಿ ಪರೀಕ್ಷೆಗಳಿಗೆ ಇಂಟಿಗ್ರೇಟೆಡ್ ತರಬೇತಿ ನೀಡಲಾಗುವುದು ಎಂದವರು ತಿಳಿಸಿದ್ದಾರೆ.

ಕೊರೋನ ಸಂತ್ರಸ್ತ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಶಿಕ್ಷಣ

ಕೊರೋನದಿಂದ ಸಂತ್ರಸ್ತರಾದ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಶಿಕ್ಷಣ ನೀಡಲಾಗುವುದು ಎಂದು ಡಾ. ಅಬ್ದುಲ್ ಖದೀರ್ ಘೋಷಿಸಿದ್ದಾರೆ. ಕೊರೋನ ಕಾರಣ ಪಾಲಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ವಸತಿ ಸಹಿತ ಉಚಿತ ಪ್ರವೇಶ ಕಲ್ಪಿಸಲಾಗುವುದು. ಈಗಾಗಲೇ ಒಬ್ಬ ವಿದ್ಯಾರ್ಥಿಗೆ ಉಚಿತ ಪ್ರವೇಶ ನೀಡಲಾಗಿದೆ. ಸಂತ್ರಸ್ತ ವಿದ್ಯಾರ್ಥಿಗಳು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ಯಾವುದೇ ಗ್ರಾಮಸ್ಥರು ಬಡ ವಿದ್ಯಾರ್ಥಿಗಳ ಪಿಯುಸಿ ಶಿಕ್ಷಣದ ಶೇ. 50 ರಷ್ಟು ಶುಲ್ಕವನ್ನು ದೇಣಿಗೆ ರೂಪದಲ್ಲಿ ನೀಡಲು ಮುಂದಾದರೆ ಶಾಹೀನ್ ಶಿಕ್ಷಣ ಸಂಸ್ಥೆ ಉಳಿದ ಶೇ. 50ರಷ್ಟು ವೆಚ್ಚವನ್ನು ಭರಿಸಲಿದೆ.

ಔರಾದ್ ತಾಲೂಕಿನ ಧನರಾಜ ಎನ್ನುವ ವಿದ್ಯಾರ್ಥಿಯ ಶಿಕ್ಷಣಕ್ಕೆ ಗ್ರಾಮಸ್ಥರು ದೇಣಿಗೆ ನೀಡಿ ನೆರವಾಗಿದ್ದರು. ಶಾಹೀನ್ ಕಾಲೇಜಿನಿಂದ ಶುಲ್ಕದಲ್ಲಿ ಶೇ 50 ರಷ್ಟು ರಿಯಾಯಿತಿ ನೀಡಲಾಗಿತ್ತು. ಈ ವಿದ್ಯಾರ್ಥಿ ಈಗ ಎಂಜಿನಿಯರ್ ಆಗಿದ್ದು, ಸದ್ಯ ದಕ್ಷಿಣ ಆಫ್ರಿಕಾದ ಜೋಹಾನ್ಸ್‍ ಬರ್ಗ್ ‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ರೀತಿ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ನಾಗರಾಜ್, ಮಹಮ್ಮದ್ ಯಹ್ಯಾ ಅವರೂ ಇಂತಹದೇ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಯ ಶಿಕ್ಷಣಕ್ಕೆ ಶಾಹೀನ್ ಸಂಸ್ಥೆ ಜೊತೆ ಕೈಜೋಡಿಸಿದ ಗ್ರಾಮಸ್ಥರು

ಬಸವಕಲ್ಯಾಣ ತಾಲೂಕಿನ ಚಂಡಕಾಪುರ ಗ್ರಾಮಸ್ಥರು ಗ್ರಾಮದ ಲಾರಿ ಚಾಲಕ ದಿಲೀಪ್ ಪಾಂಚಾಳರ ಪುತ್ರಿ ಆರತಿ ಅವರ ಪಿಯುಸಿ ಶಿಕ್ಷಣಕ್ಕೆ ದೇಣಿಗೆ ನೀಡಿದ್ದಾರೆ.

ಆರತಿ ಎಸೆಸೆಲ್ಸಿಯಲ್ಲಿ ಶೇ 83.5ರಷ್ಟು ಅಂಕ ಗಳಿಸಿ ಉತ್ತೀರ್ಣಳಾಗಿದ್ದು, ಪಿಯುಸಿ ಪ್ರವೇಶಕ್ಕೆ ಆರ್ಥಿಕ ಸಮಸ್ಯೆ ತೊಡಕಾಗಿತ್ತು. ಗ್ರಾಮದ ಡಾ. ದತ್ತಾತ್ರೇಯ ಜಾಧವ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಬಿ. ಭಜಂತ್ರಿ, ಶಿಕ್ಷಕ ಉಸ್ಮಾನ್, ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ, ಜಾಧವ, ಜ್ಞಾನೇಶ್ವರ ಹಾಗೂ ಬಡಿಗೇರಿ ಅವರು ಸೇರಿ ಶುಲ್ಕದ ಶೇ.50ರಷ್ಟು ಹಣ ನೀಡಿದ್ದರು. ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವಾಗಬೇಕು ಎಂದು ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರನ್ನು ಕೋರಿದರು. ಇದಕ್ಕೆ ಸ್ಪಂದಿಸಿದ ಅವರು ಶುಲ್ಕದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಿದ್ದಾರೆ.

100 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ಜಿಲ್ಲಾಡಳಿತವು ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಪ್ರವೇಶ ಕಲ್ಪಿಸುತ್ತಿದೆ. ಶಾಹೀನ್ ಶಿಕ್ಷಣ ಸಂಸ್ಥೆಯ ಎಲ್ಲ ಶಾಖೆಗಳು ಸೇರಿ ಒಟ್ಟು 100 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂ. 8197077682, ಟೋಲ್ ಫ್ರೀ ಸಂಖ್ಯೆ 1800 121 6235 ಅಥವಾ ವೆಬ್ ಸೈಟ್: www.shaheengroup.orgನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News