ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ ಆಯುಕ್ತರೇ ಹೊಣೆ: ಗೃಹ ಸಚಿವ ಬೊಮ್ಮಾಯಿ ಎಚ್ಚರಿಕೆ

Update: 2020-08-30 14:29 GMT

ಹುಬ್ಬಳ್ಳಿ, ಆ. 30: ಅವಳಿ ನಗರ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಾನೂನು ಮತ್ತು ಸುವ್ಯಸ್ಥೆಗೆ ಯಾವುದೇ ರೀತಿಯ ಧಕ್ಕೆ ಬಂದರೇ ಅದರ ಹೊಣೆಗಾರಿಕೆಯನ್ನು ಹು-ಧಾ ನಗರ ಪೊಲೀಸ್ ಆಯುಕ್ತರೇ ಹೊರಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಳಿ ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಸೂಕ್ತ ಕಡಿವಾಣ ಹಾಕಬೇಕು. ಹಾಗೊಂದು ಬಾರಿ ಕಡಿವಾಣ ಹಾಕದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೇ ಹೊಣೆಗಾರಿಕೆಯನ್ನು ಕಮಿಷನರ್ ಅವರೇ ಹೊರಬೇಕೆಂದು ಇದೇ ವೇಳೆ ತಿಳಿಸಿದರು.

ನಗರದಲ್ಲಿ ಹೆಚ್ಚಿನ ರೀತಿಯಲ್ಲಿ ಅಪರಾಧ ಪ್ರಕರಣಗಳು ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಎರಡು ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲ್ಲೆ, ಕೊಲೆಯಂಥ ಗಂಭೀರ ಅಪರಾಧಗಳು ನಡೆಯುತ್ತಿವೆ. ಇವುಗಳ ನಿಯಂತ್ರಣಕ್ಕೆ ನಗರ ಪೊಲೀಸ್ ಕಮಿಷನರ್ ಅವರು ಕಚೇರಿಯಲ್ಲಿ ಕುಳಿತು ಕಾಗದ ಪತ್ರಗಳ ಮೂಲಕ ಸೂಚನೆ ನೀಡುವುದಲ್ಲ. ಸ್ವತಃ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಬೇಕೆಂದು ಸೂಚಿಸಿದ್ದೇನೆ ಎಂದರು.

ಅಪರಾಧ ಪ್ರಕರಣಗಳನ್ನು ನಿಯಂತ್ರಿಲು ಕ್ರೈಂ ಟೀಂ ರಚಿಸಲು ಸೂಚಿಸಿದ್ದೇನೆ. ಅಪರಾಧ ಚಟುವಟಿಕೆಗಳ ಸಂಪೂರ್ಣ ನಿಯಂತ್ರಣಕ್ಕೆ ಕಮಿಷನರ್, ಡಿಸಿಪಿಗೆ ಒಂದು ವಾರದ ಗಡುವು ನೀಡಿದ್ದು, ನಾನು ಸಹ ಆ ಕುರಿತು ಪರಿಶೀಲನೆ ನಡೆಸುತ್ತ ಇರುತ್ತೇನೆ. ನಗರದಲ್ಲಿ ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News