ಪುತ್ಥಳಿ ವಿವಾದದ ಬೆನ್ನಲ್ಲೇ ಹರಿದಾಡುತ್ತಿವೆ ರಾಯಣ್ಣ- ಶಿವಾಜಿ ಬಗ್ಗೆ ಪ್ರಚೋದನಕಾರಿ ಪೋಸ್ಟ್ ಗಳು

Update: 2020-08-30 14:50 GMT
ರಾಯಣ್ಣ- ಶಿವಾಜಿ ಪ್ರತಿಮೆಗೆ ಸಚಿವರಿಂದ ಮಾಲಾರ್ಪಣೆ (ಫೈಲ್ ಫೋಟೋ)

ಬೆಳಗಾವಿ, ಆ. 30: ಇಲ್ಲಿನ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮರು ಪ್ರತಿಷ್ಠಾನಪನೆ ವಿವಾದ ಇತ್ಯರ್ಥವಾಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣದಲ್ಲಿ ಶಿವಾಜಿ ಹಾಗೂ ಸಂಗೊಳ್ಳಿ ರಾಯಣ್ಣರ ಪರ-ವಿರುದ್ಧವಾಗಿ ಪ್ರಚೋದನಕಾರಿ ಪೋಸ್ಟ್ ಗಳು ಹರಿದಾಡುತ್ತಿದ್ದು, ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.

ಪೀರನವಾಡಿ ವೃತ್ತದಲ್ಲಿ ಸ್ಥಾಪನೆಯಾಗಿರುವ ರಾಯಣ್ಣ ಪ್ರತಿಮೆ ಬಗ್ಗೆ ಭುಗಿಲೆದ್ದಿದ್ದ ವಿವಾದವನ್ನು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳ ಜಂಟಿ ಸಭೆಯಲ್ಲಿ ಸೌಹಾರ್ದತೆಯಿಂದ ಬಗೆಹರಿಸಲಾಗಿತ್ತು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಶಿವಾಜಿ- ರಾಯಣ್ಣ ವಿರುದ್ಧದ ಪೋಸ್ಟ್ ಗಳು ಹರಿದಾಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಮತ್ತು ಮರಾಠ ಸಂಘಟನೆಗಳು ಒತ್ತಾಯಿಸಿವೆ.

ಒಂದೆಡೆ ಶಿವಾಜಿ ಪರವಾಗಿ ಪೋಸ್ಟ್ ಗಳು ಹರಿಬಿಡಲಾಗಿದೆ. ಮತ್ತೊಂದೆಡೆ `ವಲಸಿಗರನ್ನು ಓಡಿಸಿ ಕರ್ನಾಟಕವನ್ನು ಉಳಿಸಿ' ಎಂಬ ಪೇಸ್‍ಬುಕ್ ಪುಟದಲ್ಲಿ ಶಿವಾಜಿ ವಿರುದ್ಧವಾಗಿ ನಿರಂತರವಾದ ಪೋಸ್ಟ್ ಗಳನ್ನು ಹಾಕಲಾಗಿದ್ದು, ಈ ಪುಟದ ವಿರುದ್ಧ ಹಾಗೂ ಅದನ್ನು ಹಂಚುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿವಾಜಿ ಅಭಿಮಾನಿಗಳು ಸಾಮಾಜಿಕ ಜಾಲತಾಣ ಹಾಗೂ ಪ್ರತಿಭಟನೆ ಮೂಲಕ ಆಗ್ರಹಿಸಿದ್ದಾರೆ.

ಪೊಲೀಸ್ ಆಯುಕ್ತರ ಎಚ್ಚರಿಕೆ: ಈ ಸಂಬಂಧ, ಸಾಮಾಜಿಕ ಜಾಲತಾಣದಲ್ಲಿ ಶಿವಾಜಿ ಮಹಾರಾಜ ಹಾಗೂ ಸಂಗೊಳ್ಳಿ ರಾಯಣ್ಣ ಬಗ್ಗೆ ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ಕೆ.ತ್ಯಾಗರಾಜನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಫೇಸ್ ಬುಕ್ ಪೇಜ್ ನ ಅಡ್ಮಿನ್ ಹಾಗೂ ಕಮೆಂಟ್ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಕೆ.ತ್ಯಾಗರಾಜನ್ ಎಚ್ಚರಿಕೆ ನೀಡಿದ್ದಾರೆ.

ಮರಾಠರ ಪ್ರತಿಭಟನೆ: ಸಾಮಾಜಿಕ ಜಾಲತಾಣದಲ್ಲಿ ಶಿವಾಜಿ ಮಹಾರಾಜರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮರಾಠ ಸಮುದಾಯದ ಮುಖಂಡರು ಬೆಳಗಾವಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಸೈಬರ್ ಕ್ರೈಂ ಠಾಣೆ ಎದುರು ಧರಣಿ ನಡೆಸಿದ ವಿವಿಧ ಮರಾಠಿ ಸಂಘಟನೆಗಳು, ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಸುಖಾಂತ್ಯವಾಗಿದೆ. ರಾಯಣ್ಣ ಮತ್ತು ಶಿವಾಜಿ ದೇಶದ ಆಸ್ತಿ ಎಂದು ಗ್ರಾಮಸ್ಥರೇ ವಿವಾದ ಇತ್ಯರ್ಥಗೊಳಿಸಿದ್ದಾರೆ. ಆದರೆ, ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಅನುಯಾಯಿಗಳ ಮಧ್ಯೆ ವಿವಾದದ ಕಿಚ್ಚು ಹೊತ್ತಿಕೊಂಡಿದೆ. ವಲಸಿಗರನ್ನು ಓಡಿಸಿ ಕರ್ನಾಟಕವನ್ನು ಉಳಿಸಿ ಎಂದು ಫೇಸ್‍ಬುಕ್ ಪೇಜ್‍ನಲ್ಲಿ ಪೋಸ್ಟ್ ಹಾಕಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಲ್ಲದೆ ಬ್ರಿಟಿಷರ ಹೆಡೆಮುರಿ ಕಟ್ಟಿದ ವೀರ ಯಾರು ಎಂದು ಪ್ರಶ್ನೆಯೂ ಆ ಪೋಸ್ಟ್ ನಲ್ಲಿ ಮಾಡಲಾಗಿದೆ. ಹೀಗಾಗಿ ಇಂತಹ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕಮಿಷನರ್ ಡಾ.ಕೆ. ತ್ಯಾಗರಾಜನ್, ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿ, ತಪ್ಪಿತಸ್ಥರು ಯಾರೇ ಆದರೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News