ಲಡಾಖ್ ಘರ್ಷಣೆಗಳ ಬಳಿಕ ದಕ್ಷಿಣ ಚೀನಾ ಸಮುದ್ರಕ್ಕೆ ಯುದ್ಧನೌಕೆ ಕಳುಹಿಸಿದ್ದ ಭಾರತೀಯ ನೌಕಾಪಡೆ: ವರದಿ

Update: 2020-08-30 15:57 GMT
ಸಾಂದರ್ಭಿಕ ಚಿತ್ರ

  ಹೊಸದಿಲ್ಲಿ, ಆ.30: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಜೂ.15ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದ ಬೆನ್ನಿಗೇ ಚುರುಕಾಗಿ ಕಾರ್ಯಾಚರಣೆಗಿಳಿದಿದ್ದ ಭಾರತೀಯ ನೌಕಾಪಡೆಯು ದಕ್ಷಿಣ ಚೀನಾ ಸಮುದ್ರದಲ್ಲಿ ನಿಯೋಜನೆಗಾಗಿ ತನ್ನ ಮುಂಚೂಣಿ ಯುದ್ಧನೌಕೆಯನ್ನು ರವಾನಿಸಿತ್ತು ಮತ್ತು ಇದು ಚೀನಾದ ಅಸಮಾಧಾನಕ್ಕೆ ಕಾರಣವಾಗಿತ್ತು. ಉಭಯ ದೇಶಗಳ ನಡುವಿನ ಮಾತುಕತೆಗಳ ವೇಳೆ ಚೀನಾ ಭಾರತದ ಈ ಕ್ರಮಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿತ್ತು ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

2009ರಿಂದ ದ.ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳು ಮತ್ತು ಮಿಲಿಟರಿ ಅಸ್ತಿತ್ವದ ಮೂಲಕ ತನ್ನ ಉಪಸ್ಥಿತಿಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿರುವ ಚೀನಾ ಈ ಪ್ರದೇಶದಲ್ಲಿ ಭಾರತೀಯ ಯುದ್ಧನೌಕೆಗಳ ಉಪಸ್ಥಿತಿಯನ್ನು ವಿರೋಧಿಸುತ್ತಿದೆ. ದ.ಚೀನಾ ಸಮುದ್ರದ ಹೆಚ್ಚಿನ ಪ್ರದೇಶ ತನಗೆ ಸೇರಿದ್ದಾಗಿದೆ ಎಂದು ಅದು ಪ್ರತಿಪಾದಿಸುತ್ತಿದೆ.

 ಗಲ್ವಾನ್ ಘರ್ಷಣೆಗಳ ಬೆನ್ನಲ್ಲೇ ಭಾರತೀಯ ನೌಕಾಪಡೆಯು ದ.ಚೀನಾ ಸಮುದ್ರದಲ್ಲಿ ತನ್ನ ಯುದ್ಧನೌಕೆಯನ್ನು ನಿಯೋಜಿಸಿದ್ದು ಚೀನಾದ ನೌಕಾಪಡೆ ಮತ್ತು ಭದ್ರತಾ ವ್ಯವಸ್ಥೆಯ ಮೇಲೆ ಅಪೇಕ್ಷಿತ ಪರಿಣಾಮವನ್ನು ಬೀರಿತ್ತು ಮತ್ತು ಭಾರತದೊಂದಿಗಿನ ರಾಜತಾಂತ್ರಿಕ ಮಟ್ಟದ ಮಾತುಕತೆಗಳ ವೇಳೆ ಚೀನಾ ಈ ಬಗ್ಗೆ ಆಕ್ಷೇಪವನ್ನೆತ್ತಿತ್ತು ಎಂದು ಸರಕಾರಿ ಮೂಲಗಳು ತಿಳಿಸಿದವು.

ಆ ಸಂದರ್ಭದಲ್ಲಿ ಅಮೆರಿಕ ಕೂಡ ದ.ಚೀನಾ ಪ್ರದೇಶದಲ್ಲಿ ತನ್ನ ವಿಧ್ವಂಸಕ ನೌಕೆಗಳು ಮತ್ತು ಯುದ್ಧ ನೌಕೆಗಳನ್ನು ನಿಯೋಜಿಸಿತ್ತು ಹಾಗೂ ಭಾರತೀಯ ಯುದ್ಧನೌಕೆಯು ರಹಸ್ಯ ಸಂವಹನ ವ್ಯವಸ್ಥೆಗಳ ಮೂಲಕ ಅಮೆರಿಕದ ನೌಕೆಗಳೊಂದಿಗೆ ಸಂಪರ್ಕವನ್ನು ಹೊಂದಿತ್ತು. ನೌಕಾಪಡೆಯ ಈ ಇಡೀ ಕಾರ್ಯಾಚರಣೆಯನ್ನು ಅತ್ಯಂತ ರಹಸ್ಯವಾಗಿ ನಡೆಸಲಾಗಿತ್ತು. ಇದೇ ವೇಳೆ ಚೀನಿ ನೌಕಾಪಡೆಯ ಚಟುವಟಿಕೆಗಳ ಮೇಲೆ ಕಣ್ಣಿರಿಸಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳ ಬಳಿಯ ಮಲಕ್ಕಾ ಜಲಸಂಧಿ ಹಾಗೂ ಚೀನಿ ಹಡಗುಗಳು ಹಿಂದು ಮಹಾಸಾಗರವನ್ನು ಪ್ರವೇಶಿಸುವ ಮಾರ್ಗದಲ್ಲಿ ತನ್ನ ಮುಂಚೂಣಿ ಯುದ್ಧನೌಕೆಗಳನ್ನು ನಿಯೋಜಿಸಿತ್ತು. ತೈಲವನ್ನು ಹೊತ್ತುಕೊಂಡು ಮರಳುವ ಅಥವಾ ಇತರ ಖಂಡಗಳತ್ತ ಸರಕುಗಳನ್ನು ಸಾಗಿಸುವ ಚೀನಾದ ಹಲವಾರು ವಾಣಿಜ್ಯ ನೌಕೆಗಳು ಸಹ ಮಲಕ್ಕಾ ಜಲಸಂಧಿಯ ಮೂಲಕ ಸಾಗುತ್ತವೆ.

ಪೂರ್ವ ಅಥವಾ ಪಶ್ಚಿಮ ರಂಗದಲ್ಲಿ ವೈರಿಗಳ ಯಾವುದೇ ದುಸ್ಸಾಹಸವನ್ನು ತಡೆಯಲು ಭಾರತಿಯ ನೌಕಾಪಡೆಯು ಸಂಪೂರ್ಣವಾಗಿ ಸಮರ್ಥವಾಗಿದೆ ಎಂದು ಹೇಳಿದ ಮೂಲಗಳು,ಅದು ಪೂರ್ವ ಆಫ್ರಿಕಾದ ಜಿಬೊಟಿ ಸುತ್ತ ಉಪಸ್ಥಿತ ಚೀನಿ ಹಡಗುಗಳ ಬಗ್ಗೆಯೂ ನಿಗಾ ವಹಿಸಿದೆ ಮತ್ತು ರಾಷ್ಟ್ರದ ಹಿತಾಸಕ್ತಿಯ ರಕ್ಷಣೆಗಾಗಿ ಸಮೀಪದಲ್ಲಿ ತನ್ನ ನೌಕೆಗಳನ್ನು ನಿಯೋಜಿಸಿದೆ ಎಂದು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News