ದೇವರೇ ಸರಿಪಡಿಸುತ್ತಾನೆ ಎಂದು ಸುಮ್ಮನೆ ಕೂರಲು ಸಾಧ್ಯವಿಲ್ಲ: ನಿರ್ಮಲಾ ಹೇಳಿಕೆಗೆ ದೇವೇಗೌಡ ತಿರುಗೇಟು

Update: 2020-08-30 16:00 GMT

ಬೆಂಗಳೂರು, ಆ.30: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಹಾರ ಮೊತ್ತ ನೀಡಲು ಕಷ್ಟಸಾಧ್ಯವಾಗಲಿದೆ ಎಂದು, ರಾಜ್ಯಗಳು ಸಾಲ ಮಾಡಬೇಕೆಂದು ಕೇಂದ್ರ ಸರಕಾರ‌ ಸಲಹೆ ನೀಡಿರುವುದಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯಗಳು ಹಾಗೂ ಕೇಂದ್ರ ಸರಕಾರದ ನಡುವಿನ ಸಂಬಂಧವನ್ನು ಹದಗೆಡಿಸಿದ್ದು, ಜಿಎಸ್ಟಿ ಪರಿಹಾರ ಮೊತ್ತದಲ್ಲಿ ಕೊರತೆಯಾಗಿರುವ ಹಿನ್ನೆಲೆ ರಾಜ್ಯಗಳು ಸಾಲದ ಮೊರೆ ಹೋಗಬೇಕೆಂದಿರುವುದು ಸರಿಯಲ್ಲ ಎಂದು ದೇವೇಗೌಡ ಆಕ್ಷೇಪಿಸಿದ್ದಾರೆ.

2017ರಲ್ಲಿ ಜಿಎಸ್ಟಿ ಜಾರಿಗೊಳಿಸುವ ಸಂದರ್ಭ ರಾಜ್ಯ ಸರಕಾರಗಳಿಗೆ ತೆರಿಗೆ ನಷ್ಟದ ಬಾಪ್ತು ಜಿಎಸ್ಟಿ ಪರಿಹಾರ ಮೊತ್ತ ನೀಡುವುದಾಗಿ ಒಪ್ಪಿಕೊಂಡಿತ್ತು. ಹೀಗಾಗಿ ಕೇಂದ್ರ ಸರಕಾರವೇ ಆರ್ ಬಿಐ ನಿಂದ ಸಾಲ ಪಡೆದು ರಾಜ್ಯಗಳಿಗೆ ಪರಿಹಾರ ನೀಡುವುದು ಒಳಿತು. ಈ ನಿಟ್ಟಿನಲ್ಲಿ ಕೇಂದ್ರ ತನ್ನ ಹೊಣೆಗಾರಿಕೆ ತಪ್ಪಿಸಿಕೊಳ್ಳುವುದು ಸಲ್ಲ ಎಂದು ಹೇಳಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯಗಳು ಈಗಾಗಲೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಜಿಎಸ್ಟಿ ಜೊತೆಗೆ 15ನ ಹಣಕಾಸು ಆಯೋಗವೂ ರಾಜ್ಯದ ಪಾಲಿನ ಕೇಂದ್ರ ತೆರಿಗೆಯನ್ನು ಕಡಿತಗೊಳಿಸಿದೆ ಎಂದಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ಕೋವಿಡ್-19 ಸೋಂಕಿನ ಕುರಿತು ದೇವರ ಆಟ ಎಂಬ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ಹಾಗೆಂದು ಇದನ್ನೆಲ್ಲಾ ದೇವರೇ ಸರಿಪಡಿಸುತ್ತಾನೆ ಎಂದು ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಪತ್ರದ ಮೂಲಕ ದೇವೇಗೌಡ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News