ದ್ವಿತೀಯ ಪಿಯು ಮರು ಮೌಲ್ಯಮಾಪನ: 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಗಳಲ್ಲಿ ವ್ಯತ್ಯಾಸ

Update: 2020-08-30 16:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 30: ದ್ವಿತೀಯ ಪಿಯು ಮರುಮೌಲ್ಯಮಾಪನದಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಅಂಕಗಳು ವ್ಯತ್ಯಾಸಗೊಂಡಿದ್ದು, ಅನುತ್ತೀರ್ಣಗೊಂಡಿದ್ದ ಅನೇಕ ವಿದ್ಯಾರ್ಥಿಗಳು ಈಗ ಉತ್ತೀರ್ಣರಾಗಿದ್ದಾರೆ.

ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯ ಸ್ಕ್ಯಾನ್ ಪ್ರತಿ ಪಡೆಯಲು 71 ಸಾವಿರ ಅರ್ಜಿ ಸಲ್ಲಿಸಿಕೆಯಾಗಿದ್ದವು. ಪ್ರತಿ ಪಡೆದ ನಂತರ 12,041 ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 2,144 ವಿದ್ಯಾರ್ಥಿಗಳ ಅಂಕಗಳು ಬದಲಾವಣೆಯಾಗಿದ್ದು, ಈ ಮೊದಲು ಪಡೆದಿದ್ದ ಅಂಕಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

ಪಿಯು ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಆಂಗ್ಲಭಾಷೆಯಲ್ಲಿ ಅತಿ ಹೆಚ್ಚು ಅಂದರೆ 38 ಅಂಕಗಳನ್ನು ನೀಡಲಾಗಿದೆ. ದ್ವಿತೀಯ ಸ್ಥಾನದಲ್ಲಿ 35 ಅಂಕಗಳನ್ನು ಕನ್ನಡಕ್ಕೆ ನೀಡಲಾಗಿದೆ. 542 ಉತ್ತರ ಪತ್ರಿಕೆಗಳಲ್ಲಿ ಅಂಕಗಳನ್ನು ಒಟ್ಟುಗೂಡಿಸುವಾಗ ತಪ್ಪುಗಳು ಸಂಭವಿಸಿದ್ದವು ಮತ್ತು ಮೌಲ್ಯಮಾಪನವನ್ನೇ ಮಾಡಿರಲಿಲ್ಲ ಎಂಬ ಆತಂಕಕಾರಿ ವಿಷಯ ತಿಳಿದುಬಂದಿದೆ.

ನೋಟಿಸ್ ಇಲ್ಲ: ಪ್ರತಿ ವರ್ಷ ಅಂಕಗಳು ಬದಲಾವಣೆಯಾದಾಗ ಮೊದಲಿಗೆ ಆ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರಿಗೆ ನೋಟಿಸ್ ನೀಡಲಾಗುತ್ತದೆ. ಆನಂತರ ಅಂಕಗಳ ಆಧಾರದ ಮೇಲೆ ದಂಡ ವಿಧಿಸಲಾಗುತ್ತದೆ. ಆದರೆ, ಈ ವರ್ಷ ಕೊರೋನದಿಂದ ಮೌಲ್ಯಮಾಪನ ಕಾರ್ಯಕ್ಕೆ ಮೌಲ್ಯಮಾಪಕರು ಹಾಜರಾಗಿರುವುದೇ ದೊಡ್ಡದು. ಹೀಗಾಗಿ, ಅವರ ಕರ್ತವ್ಯಕ್ಕೆ ಬೆಲೆ ನೀಡಿ ನೋಟಿಸ್ ನೀಡುವುದು ಮತ್ತು ದಂಡ ಶುಲ್ಕ ವಿಧಿಸುವುದನ್ನು ಕೈಬಿಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಆಲೋಚಿಸಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News