ಅಸ್ಸಾಮಿನ ಈ ಗ್ರಾಮದ ಬಂಗಾಳಿ ಹಿಂದೂಗಳ ನಿದ್ರೆಗೆಡಿಸಿದೆ ಎನ್‌ಆರ್‌ಸಿ

Update: 2020-08-31 14:24 GMT

ಹೊಸದಿಲ್ಲಿ,ಆ.31: ಅಸ್ಸಾಮಿನಲ್ಲಿ ಎನ್‌ಆರ್‌ಸಿ ಪಟ್ಟಿ ಪ್ರಕಟಗೊಂಡಾಗಿನಿಂದ ನಾಗಾಂವ್ ಜಿಲ್ಲೆಯ ಭರಿ ಧುವಾ ಗ್ರಾಮದಲ್ಲಿ ವಾಸವಿರುವ ಬಂಗಾಳಿ ಭಾಷಿಕ ಹಿಂದೂಗಳ ಬದುಕು ದುರ್ಭರವಾಗಿದೆ. ಈ ಗ್ರಾಮದ ಜನಸಂಖ್ಯೆ ಸುಮಾರು 5,000ದಷ್ಟಿದ್ದು,ಹೆಚ್ಚಿನ ಜನರು ಬಂಗಾಳಿ ಮಾತನಾಡುವ ಹಿಂದುಗಳಾಗಿದ್ದಾರೆ. ಇಲ್ಲಿಯ ಶೇ.70ಕ್ಕೂ ಅಧಿಕ ಜನರು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ. ಇದು ಅವರನ್ನು ಆಸ್ತಿ ಖರೀದಿ ಮತ್ತು ಸರಕಾರಿ ಉದ್ಯೋಗಗಳಿಂದ ವಂಚಿತರನ್ನಾಗಿಸಿದೆ. ಯಾವಾಗ ಬಂಧನ ಕೇಂದ್ರವನ್ನು ಸೇರಬೇಕಾದೀತೋ ಎಂಬ ಭಯದಲ್ಲಿಯೇ ಈ ಗ್ರಾಮದ ಜನರು ಬದುಕುತ್ತಿದ್ದಾರೆ.

ಗ್ರಾಮದ ನಿವಾಸಿ,ವೃತ್ತಿಯಲ್ಲಿ ಬಡಗಿಯಾಗಿರುವ ಆರಾ ಕುಮಾರ ಬಿಸ್ವಾಸ್ ಕಳೆದ ಜನವರಿಯಲ್ಲಿ ತನ್ನ ಉಳಿತಾಯದ ಹಣದೊಂದಿಗೆ ಸಾಲವಾಗಿ ಪಡೆದಿದ್ದ ಮೊತ್ತವನ್ನು ಸೇರಿಸಿ ಮೂರು ಲಕ್ಷ ರೂ.ಗಳಿಗೆ ಕಾಲು ಎಕರೆ ಭೂಮಿಯನ್ನು ಖರೀದಿಸಿದ್ದ. ಎರಡು ದಿನಗಳ ಬಳಿಕ ಭೂಮಿಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ನೋಂದಣಾಧಿಕಾರಿಗಳ ಕಚೇರಿಗೆ ತೆರಳಿದಾಗ ಆತನಿಗೆ ಆಘಾತ ಕಾದಿತ್ತು. ಹಲವಾರು ದಾಖಲೆಗಳನ್ನೂ ಸಲ್ಲಿಸಿದ್ದರೂ ಆತ ತಾನು ಭಾರತೀಯ ಎನ್ನುವುದನ್ನು ಸಾಬೀತು ಮಾಡಬೇಕಿತ್ತು. ಇದಕ್ಕಾಗಿ ಆತ ತನ್ನ ಹೆಸರು ಇರುವ ಎನ್‌ಆರ್‌ಸಿಯ ಕಂಪ್ಯೂಟರ್ ಪ್ರತಿಯನ್ನು ಸಲ್ಲಿಸಿಬೇಕಿತ್ತು. ಆದರೆ ಆತನ ಹೆಸರು ಎನ್‌ಆರ್‌ಸಿಯಲ್ಲಿ ಸೇರ್ಪಡೆಗೊಂಡಿಲ್ಲ.

ಎನ್‌ಆರ್‌ಸಿ ನಿಯಮದಂತೆ 1971,ಮಾ.24ರ ನಂತರ ಅಸ್ಸಾಮಿಗೆ ವಲಸೆ ಬಂದವರನ್ನು ವಿದೇಶಿಯರು ಎಂದು ಪರಿಗಣಿಸಲಾಗುತ್ತದೆ. ಆರಾ ಕುಮಾರನ ತಂದೆ ಅಮೂಲ್ಯ ಬಿಸ್ವಾಸ್ ಹೆಸರು 1971ರ ಮತದಾರರ ಪಟ್ಟಿಯಲ್ಲಿದ್ದರೂ ಅವರೂ ಎನ್‌ಆರ್‌ಸಿಯಿಂದ ಹೊರಗುಳಿದಿದ್ದಾರೆ. ಎನ್‌ಆರ್‌ಸಿಯಲ್ಲಿ ಹೆಸರಿಲ್ಲದಿದ್ದರೆ ಭೂಮಿಯನ್ನು ನೋಂದಾಯಿಸುವುದಿಲ್ಲ ಎಂದು ಅಧಿಕಾರಿಗಳು ಆರಾ ಕುಮಾರ್‌ಗೆ ತಿಳಿಸಿದ್ದಾರೆ. ಇದು ಆರಾ ಕುಮಾರ ಒಬ್ಬನದೇ ಕಥೆಯಲ್ಲ, ಗ್ರಾಮದ ಹಲವಾರು ಜನರ ಆಸ್ತಿಗಳು ಇನ್ನೂ ನೋಂದಣಿಯಾಗಿಲ್ಲ. ಎನ್‌ಆರ್‌ಸಿಯಿಂದ ಹೆಸರು ಹೊರಗಿರುವುದು ಇದಕ್ಕೆ ಕಾರಣ. ಎನ್‌ಆರ್‌ಸಿಯಲ್ಲಿ ಹೆಸರು ಸೇರಿಸುವಂತೆ ಅವರು ಸಲ್ಲಿಸಿರುವ ಅರ್ಜಿಗಳು ವಿದೇಶಿಯರ ನ್ಯಾಯಾಧಿಕರಣಗಳಲ್ಲಿವೆ. ಈ ನ್ಯಾಯಾಧಿಕರಣಗಳಿಗೆ ಎಷ್ಟು ದಾಖಲೆಗಳನ್ನು ಸಲ್ಲಿಸಿದರೂ ಸಾಲದು. ಹೀಗಾಗಿ ಯಾವಾಗ ಈ ನ್ಯಾಯಾಧಿಕರಣಗಳು ತಮ್ಮನ್ನು ವಿದೇಶಿಯರೆಂದು ಘೋಷಿಸಿ ಬಂಧನ ಕೇದ್ರಗಳಿಗೆ ತಳ್ಳುತ್ತವೆಯೋ ಎಂಬ ಆತಂಕದಲ್ಲಿ ಭರಿ ಧುವಾ ಗ್ರಾಮಸ್ಥರಿಗೆ ನಿದ್ರೆಯೂ ಬರುತ್ತಿಲ್ಲ.

ಎನ್‌ಆರ್‌ಸಿಯಿಂದ ಹೊರಗುಳಿದಿರುವುದು ಅಸ್ಸಾಂ ನಿವಾಸಿಗಳ ಹಕ್ಕುಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ನ್ಯಾಯಾಧಿಕರಣಗಳು ವಿದೇಶಿಯ ಎಂದು ಘೋಷಿಸುವವರೆಗೆ ಎನ್‌ಆರ್‌ಸಿಯಲ್ಲಿ ಸೇರ್ಪಡೆಗೊಂಡಿಲ್ಲ ಎಂಬ ಮಾತ್ರಕ್ಕೆ ಭಾರತೀಯ ಪ್ರಜೆಯಲ್ಲ ಎಂದು ಅರ್ಥವಲ್ಲ ಎಂದು ಭಾರತ ಸರಕಾರವು ಸ್ಪಷ್ಟನೆ ನೀಡಿದ್ದರೂ ಈ ಗ್ರಾಮಸ್ಥರ ಗೋಳು ಮುಂದುವರಿದಿದೆ ಮತ್ತು ಅವರ ಗೋಳನ್ನು ಕೇಳುವವರೂ ಯಾರೂಇಲ್ಲ.

ತಮ್ಮನ್ನು ತಪ್ಪಾಗಿ ಎನ್‌ಆರ್‌ಸಿಯಿಂದ ಹೊರಗುಳಿಸಲಾಗಿದೆ ಮತ್ತು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಕಷ್ಟು ದಾಖಲೆಗಳು ತಮ್ಮ ಬಳಿಯಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕೆಲವು ಕುಟುಂಬಗಳು 50ರ ದಶಕದಲ್ಲಿಯೇ ಬಾಂಗ್ಲಾದಲ್ಲಿ ಕಿರುಕುಳ ತಾಳಲಾರದೇ ಭಾರತಕ್ಕೆ ನಿರಾಶ್ರಿತರಾಗಿ ಬಂದು ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಕುಟುಂಬದಲ್ಲಿಯ ಕೆಲವರ ಹೆಸರುಗಳು ಎನ್‌ಆರ್‌ಸಿಯಲ್ಲಿದ್ದರೆ ಇತರರ ಹೆಸರುಗಳು ಪಟ್ಟಿಯಿಂದ ಬಿಟ್ಟುಹೋಗಿವೆ. ಎನ್‌ಆರ್‌ಸಿ ಪಟ್ಟಿಯಿಂದ ಹೊರಗಿರುವ ಈ ಬಂಗಾಳಿ ಭಾಷಿಕ ಹಿಂದುಗಳು ಅದರಿಂದಾಗಿ ಅವಮಾನವನ್ನು ಎದುರಿಸುವಂತಾಗಿದೆ. ಗ್ರಾಮದಲ್ಲಿ ಜನರ ನಡುವೆ ಜಗಳ ನಡೆದಾಗ ಒಬ್ಬ ತನ್ನ ಬೈಗುಳ ಬತ್ತಳಿಕೆ ಖಾಲಿಯಾದಾಗ ಎದುರಾಳಿಯ ಬಾಯಿಯನ್ನು ಮುಚ್ಚಿಸಲು ’ನಿನ್ನ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿಲ್ಲ’ ಎಂದು ಜರಿದು ಅವಮಾನಿಸುವುದು ಮಾಮೂಲಾಗಿಬಿಟ್ಟಿದೆ.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News