ಕುಮಾರಸ್ವಾಮಿ ತಮ್ಮ ಮಾತಿನ ಮೇಲೆ ನಿಗಾ ವಹಿಸಲಿ: ಸಚಿವ ಡಾ.ಸುಧಾಕರ್

Update: 2020-08-31 16:25 GMT

ಬೆಂಗಳೂರು, ಆ.31: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಆರೋಪ ಮಾಡುವ ವೇಳೆ ಮಾತಿನ ಮೇಲೆ ನಿಗಾ ವಹಿಸಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.

ಬಿಜೆಪಿಯು ಡ್ರಗ್ ಮಾಫಿಯಾ ಹಾಗೂ ಬೆಟ್ಟಿಗ್ ಹಣವನ್ನು ಬಳಸಿಕೊಂಡು ನಮ್ಮ ಸರಕಾರ ಬೀಳಿಸಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ಅವರು ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಪಕ್ಷ ಇಬ್ಬರು ಸಂಸದರಿಂದ ನಾನೂರು ಸಂಸದರ ವರೆಗೆ ಬೆಳೆದಿದೆ ಎಂದರೆ ಪಕ್ಷದ ಸೈದ್ಧಾಂತಿಕ ಹಿನ್ನೆಲೆ ಎಷ್ಟು ಸ್ವಚ್ಛವಾಗಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಎಂದಿಗೂ ಇಂಥ ನೀಚ ಕೆಲಸಕ್ಕೆ ಕೈ ಹಾಕುವುದಿಲ್ಲ. ಕುಮಾರಸ್ವಾಮಿ ತಮ್ಮ ಮಾತಿನ ಮೇಲೆ ನಿಗಾ ಇಟ್ಟು ಹೇಳಿಕೆ ನೀಡಲಿ. ಇವರ ಹೇಳಿಕೆಯೇ ತಮ್ಮ ಹಿನ್ನೆಲೆ ಏನೆಂಬುದನ್ನು ತೋರಿಸುತ್ತಿದೆ ಎಂದು ಅವರು ಕಿಡಿಗಾರಿದರು.

ಮೃತಪಡುವ ವೈದ್ಯರನ್ನು ಹುತಾತ್ಮರೆಂದು ಪರಿಗಣಿಸಲಿ: ಕೋವಿಡ್‍ನಿಂದ ಮೃತಪಡುವ ರಿಯಲ್ ವಾರಿಯರ್ಸ್ ವೈದ್ಯರನ್ನು ಸಹ ಹುತಾತ್ಮರು ಎಂದು ಪರಿಗಣಿಸುವಂತೆ ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ ಅವರು ಪ್ರಧಾನಿ ಅವರಿಗೆ ಪತ್ರ ಬರೆದಿರುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸುಧಾಕರ್ ಹೇಳಿದರು.

ಕಳೆದ 6 ತಿಂಗಳಿಂದ ಹಗಲು-ರಾತ್ರಿ ವೈದ್ಯರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರು ನಿಜವಾದ ವಾರಿಯರ್ಸ್ ಎಂದೂ ಪರಿಗಣಿಸಿದ್ದೇವೆ. ಗಡಿಯನ್ನು ಕಾಯುವ ಯೋಧರಂತೆ ವೈದ್ಯರು ದೇಶದೊಳಗೆ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಕೋವಿಡ್‍ನಿಂದ ಸಾವನ್ನಪ್ಪಿದರೆ ಇವರನ್ನು ಹುತಾತ್ಮರು ಎಂದು ಸಂಭೋದಿಸುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಹೀಗಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅವರಿಗೆ ಬೆಂಬಲ ನೀಡಿದ್ದೇನೆ ಎಂದು ಅವರು ತಿಳಿಸಿದರು.

ಗೋ ಹತ್ಯೆ ನಿಷೇಧ ಬಿಜೆಪಿ ಪ್ರಣಾಳಿಕೆಯಲ್ಲೇ ಇದೆ: ಗೋ ಹತ್ಯೆ ನಿಷೇಧ ಮಾಡುವುದರಿಂದ ಗೋ ಮಾಂಸ ರಫ್ತು ಹಾಗೂ ಬೇಡಿಕೆ ಕೂಡ ಕಡಿಮೆ ಆಗಲಿದೆ. 2018ರ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲೂ ಇದನ್ನು ಉಲ್ಲೆಖಿಸಿದ್ದು, ನಿಷೇಧ ಆಗಲಿದೆ ಎಂದು ಸುಧಾಕರ್ ಹೇಳಿದರು.

ಗೋವನ್ನು ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಕಾಮದೇವು ಎಂದೂ ಕರೆಯುತ್ತೇವೆ. ಅದರೊಂದಿಗೆ ಮಾನವೀಯ ಸಂಬಂಧವನ್ನು ಹೊಂದಿದ್ದೇವೆ. ಈ ಮಾನವೀಯ ಸಂಬಂಧ ಇಲ್ಲದವರೇ ಗೋವನ್ನು ಮಾಂಸದಂತೆ ನೋಡುತ್ತಾರೆ. ಹೀಗಿರುವಾಗ ಅದರ ಹತ್ಯೆ ಮಾಡಿ, ರಫ್ತು ಮಾಡುವುದು ಹೇಯ ಕೃತ್ಯ. ಇದರ ನಿಷೇಧಕ್ಕೆ ನನ್ನ ಸಹಮತವಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News