ಕೋಲಾರ: ದಲಿತ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಆರೋಪ

Update: 2020-08-31 16:34 GMT

ಕೋಲಾರ, ಆ.31: ದಲಿತ ಕುಟುಂಬಕ್ಕೆ ಸೇರಿದ ಖಾಲಿ ನಿವೇಶನದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಕೋಲಾರದ ಆಂಡರ್ಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಸಿರೆಡ್ಡಿಗಾಂಡ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿ ಕಸಿರೆಡ್ಡಿಗಾಂಡ್ಲಹಳ್ಳಿ ಗ್ರಾಮದ ಶಿವರಾಮಪ್ಪ ಹಲ್ಲೆಗೊಳಗಾದವರು. ಗ್ರಾಮದ ರಘುರಾಮರೆಡ್ಡಿ ಹಾಗೂ ಅವರ ಮಕ್ಕಳಾದ ಮಂಜುನಾಥ್ ರೆಡ್ಡಿ, ಚಂದ್ರಾರೆಡ್ಡಿ ಎಂಬವರು ಶಿವರಾಮಪ್ಪ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆಗಸ್ಟ್ 29 ಶನಿವಾರ ಬೆಳಗ್ಗೆ ಘಟನೆ ನಡೆದಿದ್ದು, ಶಿವರಾಮಪ್ಪ ಕೆಜಿಎಫ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ನಡೆದು ಎರಡು ದಿನಗಳಾದರೂ ಆಂಡರ್ಸನ್ ಪೇಟೆಯ ಪೊಲೀಸರು ಪ್ರಕರಣ ದಾಖಲು ಮಾಡಲಿಲ್ಲ ಎನ್ನಲಾಗಿದ್ದು, ಹೀಗಾಗಿ ಹಿರಿಯ ದಲಿತ ಮುಖಂಡ ಸಿ.ಎಂ. ಮುನಿಯಪ್ಪ ಹಾಗೂ ಅಟ್ರಾಸಿಟಿ ಸಮಿತಿ ಸದಸ್ಯ ಅಂಬರೀಷ್ ಅವರು ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ದೂರು ನೀಡಿದ್ದರು. ಬಳಿಕ ರವಿವಾರ ಪ.ಜಾ /ಪ.ಪಂ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ದಾಖಲಾಗಿ ಎರಡು ದಿನಗಳಾದರೂ ಇಲ್ಲಿಯವರೆಗೂ ಯಾವೊಬ್ಬ ಆರೋಪಿಯನ್ನೂ ಬಂಧಿಸಿಲ್ಲ. ಆರೋಪಿಗಳು ತಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡಿಕೊಂಡು ಇದ್ದಾರೆ. ಈ ಬಗ್ಗೆ ಪೊಲೀಸರು ಆರೋಪಿಗಳನ್ನು ಬಂಧಿಸದೆ ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ಶಿವರಾಮಪ್ಪ ಕುಟುಂಬಸ್ಥರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News