ಲಾಕ್‍ಡೌನ್ ನೆಪದಲ್ಲಿ ಉದ್ಯೋಗಿಗಳನ್ನು ತೆಗೆದ ಆರೋಪ: ಜಿಂದಾಲ್ ಕಂಪೆನಿ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Update: 2020-08-31 17:22 GMT

ಬಳ್ಳಾರಿ, ಆ.31: ಲಾಕ್‍ಡೌನ್ ಆರ್ಥಿಕ ಸಂಕಷ್ಟ ಹಾಗೂ ಕೋವಿಡ್-19 ಸೋಂಕು ತೀವ್ರ ಹೆಚ್ಚಿದೆ ಎಂದು ನೆಪಹೇಳಿ ಜೆಎಸ್‍ಡ್ಲ್ಯೂ ಕಂಪೆನಿ 490 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಆರೋಪಿಸಿ ಉದ್ಯೋಗಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು, ಕಂಪೆನಿ ನಮ್ಮ ಬದುಕನ್ನು ಬೀದಿ ಪಾಲು ಮಾಡಿದೆ ಎಂದು ದೂರಿದರು.

ಕಳೆದ 25 ವರ್ಷಗಳಿಂದ ಜಿಂದಾಲ್ ಕಂಪೆನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ಏಕಾಏಕಿ ಆ.31ರೊಳಗೆ ರಾಜೀನಾಮೆ ಸಲ್ಲಿಸಬೇಕು, ಇಲ್ಲದಿದ್ದರೆ ಯಾವ ಸೌಲಭ್ಯವೂ ಸಿಗುವುದಿಲ್ಲ ಎಂದು ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ಆಡಳಿತ ಮಂಡಳಿಗೆ ಕೇಳಲು ಹೋದರೆ ಯಾವುದೇ ಉತ್ತರ ನೀಡುತ್ತಿಲ್ಲ ಎಂದು ಜಿಂದಾಲ್ ಉದ್ಯೋಗಿ ರವಿಕುಮಾರ್ ಎಂಬವರು ತಮ್ಮ ಅಳಲನ್ನು ತೋಡಿಕೊಂಡರು.

ಕೋವಿಡ್-19 ಕಾರಣ ಹೇಳಿ ಕಂಪೆನಿಯವರು ಕೆಲಸದಿಂದ ತೆಗೆದಿದ್ದಾರೆ. ಬೆಂಗಳೂರು ಕಚೇರಿಯಲ್ಲಿ ನಾಲ್ಕು ಮತ್ತು ಎನರ್ಜಿಯಲ್ಲಿ ಒಬ್ಬರನ್ನು ಉದ್ಯೋಗದಿಂದ ತೆಗೆದು ಹಾಕಿದ್ದಾರೆ. ಒಟ್ಟಾರೆ ಮೊದಲನೇ ಸ್ಲಾಟ್‍ನಲ್ಲಿ 490 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು  ಪ್ರತಿಭಟನಾಕಾರರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News