ಅರಬ್, ಚೀನಾ ದೇಶಗಳಂತೆ ಡ್ರಗ್ಸ್ ನಿಷೇಧಿಸಿ: ಸಿಎಂಗೆ ನಟಿ ತಾರಾ ಅನುರಾಧ ಒತ್ತಾಯ

Update: 2020-09-01 11:39 GMT

ಬೆಂಗಳೂರು, ಸೆ.1: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಆಡಳಿತ ನಡೆಸುತ್ತಿರುವ ಹಿನ್ನೆಲೆ ಅರಬ್, ಚೀನಾ ದೇಶಗಳಂತೆ ಡ್ರಗ್ಸ್ ನಿಷೇಧಿಸಬೇಕೆಂದು ಹಿರಿಯ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಒತ್ತಾಯಿಸಿದರು.

ಸ್ಯಾಂಡಲ್ ವುಡ್‍ನಲ್ಲಿ ಡ್ರಗ್ಸ್ ದಂಧೆ ಆರೋಪ ಸಂಬಂಧ ಕೆಲ ಪರಿಹಾರ ಹಾಗೂ ಸಲಹೆಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಆಡಳಿತದಲ್ಲಿದ್ದು, ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಇದು ಸಕಾಲ. ಮಾದಕವಸ್ತು ಜಾಲದ ವ್ಯಸನಿಗಳ ಬಗ್ಗೆ ಚಲನಚಿತ್ರರಂಗದಲ್ಲಿ ಹರಡುತ್ತಿರುವ ಸುದ್ದಿ ನೋಡಿದರೆ ಆತಂಕವಾಗುತ್ತದೆ ಎಂದರು.

ನಾನು ಚಲನಚಿತ್ರರಂಗದಲ್ಲಿ ಮೂರು ದಶಕಗಳಿಂದ ಇದ್ದೇನೆ. ಆದರೆ ಮಾದಕ ದ್ರವ್ಯ ಸೇವನೆ, ದಂಧೆಯಂತಹ ಘಟನೆ ನಾನು ನೋಡಿಲ್ಲ. ಚಲನಚಿತ್ರರಂಗವನ್ನು ಸಾರ್ವಜನಿಕರು ಹತ್ತಿರದಿಂದ ನೋಡುತ್ತಾರೆ. ಚಲನಚಿತ್ರರಂಗದಲ್ಲಿ ಒಳ್ಳೆಯವರು, ಕೆಟ್ಟವರು ಎಲ್ಲರೂ ಇದ್ದಾರೆ ಎಂದ ಅವರು, ಮಾದಕ ವಸ್ತುವಿನಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ವ್ಯಸನಕ್ಕೆ ಸಿಲುಕಿ ಹಾಳಾಗಿ ಹೋಗುತ್ತಿದ್ದಾರೆ ಎಂದು ತಿಳಿಸಿದರು.

ಮೂರು ತಿಂಗಳಿಗೆ ಒಮ್ಮೆ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಬೇಕು. ಮಕ್ಕಳ ಚಲನವಲನದ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು. ರಕ್ತ, ಗಂಟಲುದ್ರವ, ಕೂದಲು ಮೂಲಕ ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚಬಹುದು. ಅಲ್ಲದೆ, ಡ್ರಗ್ಸ್ ತೆಗೆದುಕೊಳ್ಳುವ ನಟ, ನಟಿಯರು ತಿದ್ದಿಕೊಳ್ಳಬಹುದು. ಅಥವಾ ಅರಬ್-ಚೀನಾ ದೇಶಗಳಂತೆ ಡ್ರಗ್ಸ್ ನಿಷೇಧಿಸಿದರೆ ಇನ್ನೂ ಒಳ್ಳೆಯದು ಎಂದರು.

ಯುವಜನತೆಯ ಜೀವ ಮುಖ್ಯ. ಆದ್ದರಿಂದ ನಾನು ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಮನವಿ ಸಲ್ಲಿಸುತ್ತಿದ್ದೇನೆ. ಮಾದಕವಸ್ತು ಮುಕ್ತ ಮಾಡಲು ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕು ಎಂದು ಹೇಳಿದರು.

ಮಾದಕವಸ್ತುಗಳನ್ನು ಸೇವಿಸಿದಾಗ ಅದು ನಮ್ಮ ರಕ್ತಕಣಗಳಲ್ಲಿ ಮತ್ತು ಮೂತ್ರದಲ್ಲಿ 90 ದಿನಗಳವರೆಗೆ ಜೀವಂತವಾಗಿರುತ್ತದೆ. ಮಾದಕ ವ್ಯಸನಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಸುಲಭವಾಗಿ ಪತ್ತೆ ಹಚ್ಚಿ ಈ ದುಶ್ಚಟಕ್ಕೆ ಬಲಿಯಾಗುವವರನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆಹಚ್ಚಲು ಹಾಗೂ ತಡೆಗಟ್ಟಲು ಇದು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಟಗಾರ ಅಮರೇಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News