ಕುಮಾರಸ್ವಾಮಿ- ಸಚಿವ ಸಿ.ಟಿ.ರವಿ ನಡುವೆ ವಾಕ್ಸಮರಕ್ಕೆ ಕಾರಣವಾದ 'ಡ್ರಗ್ಸ್ ಮಾಫಿಯಾ'

Update: 2020-09-01 15:16 GMT

ಬೆಂಗಳೂರು, ಸೆ.1: ‘ಮಾದಕ ದ್ರವ್ಯ (ಡ್ರಗ್ಸ್) ಮಾಫಿಯಾದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನವಾಗಿದೆ’ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿ.ಟಿ. ರವಿ, ''ಕುಮಾರಸ್ವಾಮಿಯವರು ಸಹಜ ಸ್ಥಿತಿಯಲ್ಲಿ ಆ ಹೇಳಿಕೆ ನೀಡಿದ್ದಾರೋ ಅಥವಾ ಮತ್ತಿನಲ್ಲಿ ಹೇಳಿಕೆ ನೀಡಿದ್ದಾರೋ ತಿಳಿಯುತ್ತಿಲ್ಲ. ಮೈತ್ರಿ ಸರಕಾರ ಪತನಗೊಳ್ಳಲು ಅವರ ಸಹವರ್ತಿಗಳೇ ಕಾರಣ. ಅವರದ್ದೇ ಪಕ್ಷದ ರಾಜ್ಯಾಧ್ಯಕ್ಷರೇ ರಾಜೀನಾಮೆ ಕೊಟ್ಟು ಹೊರ ಬಂದರು. ಅವರು ಹಾಗೇ ರಾಜೀನಾಮೆ ಕೊಟ್ಟು ಹೊರ ಬರಲು ಕಾರಣವೇನು ಎಂಬುದನ್ನೂ ಅವರೇ ವಿವರಿಸಿದ್ದಾರೆ. ಹೀಗಿರುವಾಗ ಕುಮಾರಸ್ವಾಮಿಯವರು ಮನಸೋ ಇಚ್ಛೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಸಿ.ಟಿ.ರವಿ ಇದೇ ವೇಳೆ ಆಕ್ಷೇಪಿಸಿದರು.

ಇಂತಹ ಹೇಳಿಕೆ ನೀಡಿರುವ ಕುಮಾರಸ್ವಾಮಿಯವರನ್ನು ಒಮ್ಮೆ ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ. ಮೈತ್ರಿ ಸರಕಾರ ಏಕೆ ಬಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ರೋಷನ್ ಬೇಗ್ ರಾಜೀನಾಮೆ ನೀಡಿದರು. ಅದಕ್ಕೆ ಅವರೇ ಕಾರಣವನ್ನು ನೀಡಿದ್ದಾರೆ. ಸಮ್ಮಿಶ್ರ ಸರಕಾರ ಏಕಾಏಕಿ ಬಿದ್ದಿಲ್ಲ. ಅದಕ್ಕೆ ಒಂದು ವರ್ಷದ ಆಂತರಿಕ ಕಿತ್ತಾಟ ಆಗಿದೆ. ಮಾದಕ ದ್ರವ್ಯ (ಡ್ರಗ್ಸ್) ಮಾಫಿಯಾದ ಹಣದಿಂದಲೇ ನನ್ನ ಸರಕಾರ ಬೀಳಿಸಿದ್ದಾರೆ ಎಂದಿರುವ ಕುಮಾರಸ್ವಾಮಿಯವರು ಅಂದು ಮುಖ್ಯಮಂತ್ರಿಯಾಗಿದ್ದರು. ಅಲ್ಲದೆ, ಗುಪ್ತಚರ ಇಲಾಖೆ ಅವರು ಕೈಕೆಳಗೆ ಇತ್ತು. ಅಂದು ಏಕೆ ಅವರು ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಹಾಗಾದರೆ ನೀವು ಅಷ್ಟು ದುರ್ಬಲ ಆಗಿದ್ದರೇ? ಅಥವಾ ನಿಮಗೆ ಡ್ರಗ್ಸ್ ಮಾಫಿಯಾದವರ ಒತ್ತಡವಿತ್ತೇ? ಅವರೊಂದಿಗೆ ನಿಮ್ಮ ಆಂತರಿಕ ಬಾಂಧವ್ಯ ಇತ್ತೇ? ಎಂದು ಕೇಳಿದ ಸಚಿವ ಸಿ.ಟಿ.ರವಿ, ನೀವು ಮುಖ್ಯಮಂತ್ರಿ ಆಗಿದ್ದವರು ಹೀಗೆಲ್ಲಾ ಮಾತಾಡಿ ನಗೆಪಾಟಲಿಗೆ ಈಡಾಗಬೇಡಿ ಲೇವಡಿ ಮಾಡಿದ್ದಾರೆ.

ಅಧಿಕಾರದ ಮತ್ತಿನಲ್ಲಿ ತೇಲುತ್ತಿರುವ ಸಚಿವ ಸಿ.ಟಿ.ರವಿ: ಎಚ್‍ಡಿಕೆ ತಿರುಗೇಟು

‘ಪ್ರವಾಸೋದ್ಯಮ ಸಚಿವ ಸಿ.ಟಿ.ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸಮಚಿತ್ತದಲ್ಲಿ ಇರುತ್ತೇನೆ. ಅಧಿಕಾರದ ಅಮಲು ಕೆಲವರಿಗೆ ಮಾತ್ರ ತೆವಲು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ನಾನು ಮುಖ್ಯಮಂತ್ರಿ ಆಗಿದ್ದಾಗ ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ, ಮೀಟರ್ ಬಡ್ಡಿ ಹತ್ತಿಕ್ಕಲು ವಿಶೇಷ ತಂಡ ರಚಿಸಿದ್ದೆ. ಇದರಿಂದ ಕನಲಿಹೋಗಿದ್ದ ದಂಧೆಕೋರರು ಶ್ರೀಲಂಕಾ ಹಾಗೂ ಮುಂಬೈಗೆ ಹಾರಿ ಹೋಗಿದ್ದರು. ಆಮೇಲೆ ಶಾಸಕರನ್ನು ಮುಂಬೈಗೆ ಕರೆದೊಯ್ಯುವಾಗ ಶಾಸಕರ ಜೊತೆ ಕಂಪೆನಿ ಕೊಟ್ಟಿದ್ದರು’ ಎಂದು ಟೀಕಿಸಿದ್ದಾರೆ.

‘ಸಿ.ಟಿ. ರವಿ ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಬಗ್ಗೆ ಮಾತನಾಡಿದರೆ ನಾನು ಸುಮ್ಮನಿರಲ್ಲ. ಅಧಿಕಾರದಲ್ಲಿ ಇರುವ ಸಚಿವರು ಮಾತಿನಲ್ಲಿ ನಿಗಾ ಇಡುವುದು ಒಳಿತು’ ಎಂದು ಕುಮಾರಸ್ವಾಮಿ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

‘ಕ್ರಿಕೆಟ್ ಬೆಟ್ಟಿಂಗ್, ಮಾಫಿಯಾ ಬಳಸಿಕೊಂಡೇ ನಮ್ಮ ಸರಕಾರದಲ್ಲಿದ್ದ ಶಾಸಕರನ್ನು ಬಿಜೆಪಿಯವರು ಬುಕ್ ಮಾಡಿಕೊಂಡಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಎರಡು ಗಂಟೆಗೊಂದು ವಿಶೇಷ ವಿಮಾನದ ಮೂಲಕ ಕರೆದುಕೊಂಡು ಹೋದಾಗ ಯಾರು ಜೊತೆಯಲ್ಲಿ ಇದ್ದರು ಎಂಬುದು ಇಡೀ ನಾಡಿಗೆ ಗೊತ್ತಿದೆ’ ಎಂದು ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

‘ಶಾಸಕರನ್ನು ಖರೀದಿ ಮಾಡಿ, ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾದ ಪಾಪದ ಹಣವನ್ನು ಚೆಲ್ಲಿ ಸರಕಾರ ಉಳಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಅಂತಹ ಕುಕೃತ್ಯಕ್ಕೆ ಇಳಿಯುವ ಜಾಯಮಾನ ನನ್ನದಾಗಿದ್ದರೆ ನನ್ನ ಸರಕಾರವನ್ನು ಅಲುಗಾಡಿಸಲು ಸಾಧ್ಯವಿರಲಿಲ್ಲ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

‘ಖಜಾನೆಗೆ 25 ಸಾವಿರ ಕೋಟಿ ರೂ.ಹಣವನ್ನು ಸಂಗ್ರಹಿಸಿ ರೈತರ ಸಾಲಮನ್ನಾ ಮಾಡಿದ ಮುಖ್ಯಮಂತ್ರಿ ನಾನು. ಹೀಗಾಗಿ ಲೂಟಿ ಮಾಡಿದವರು ಅಧಿಕಾರದ ಅಮಲಿನಲ್ಲಿ ತೇಲಾಡುವಾಗ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳಬೇಕಾಗಿಲ್ಲ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

‘ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಈ ಸರಕಾರಕ್ಕೆ ಪ್ರಕೃತಿಯು ಸಹಕರಿಸುತ್ತಿಲ್ಲ. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಅದು ಬಿಟ್ಟು ಬಾಯಿ ಚಪಲಕ್ಕೆ ಮಾತನಾಡುವ ಅಧಿಕಾರದ ಅಮಲು ಬಹಳ ಕಾಲ ಉಳಿಯುವುದಿಲ್ಲ’ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

‘ಗಿಳಿಯೋದಿ ಫಲವೇನು, ಬೆಕ್ಕು ಬಹುದ ಹೇಳಲರಿಯದು. ಜಗವೆಲ್ಲವ ಕಾಬ ಕಣ್ಣು ತನ್ನ ಕೊಂಬ ಕೊಲ್ಲೆಯ ಕಾಣಲರಿಯದು. ಇದಿರ ಗುಣವ ಬಲ್ಲವೆಂಬರು, ತಮ್ಮ ಗುಣವನರಿಯರು, ಕೂಡಲಸಂಗಮದೇವಾ’ ಎಂದು ಶರಣರ ವಚನವನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.

‘ನೀವು ಮುಖ್ಯಮಂತ್ರಿಯ ಸ್ಥಾನದಲ್ಲಿ ಕುಳಿತಿದ್ದಾಗ ಡ್ರಗ್ಸ್ ಮಾಫಿಯಾ ನಿಮ್ಮ ಸರಕಾರವನ್ನು ಬೀಳಿಸುವಷ್ಟು ಪ್ರಬಲವಾಗಿತ್ತೇ ಕುಮಾರಸ್ವಾಮಿಯವರೇ? ಒಂದು ಮಾಫಿಯಾವನ್ನು ಬಗ್ಗುಬಡಿಯದಷ್ಟು ದುರ್ಬಲವಾಗಿತ್ತೇ ತಮ್ಮ ಸರಕಾರ ಮಾಜಿ ಮುಖ್ಯಮಂತ್ರಿಗಳೇ? ಈ ಹಿಂದೆ ಕಾಂಗ್ರೆಸ್ ನನ್ನ ಸರಕಾರವನ್ನು ಬೀಳಿಸಿತು ಅನ್ನುವ ತಾವು ಇಂದು ಡ್ರಗ್ಸ್ ಮಾಫಿಯಾ ನನ್ನ ಸರಕಾರ ಬೀಳಿಸಿತು ಅನ್ನುತ್ತಿರಿ. ಯಾವುದು ಸತ್ಯ-ಯಾವುದು ಮಿಥ್ಯ? ಭಗವಂತನೇ ಬಲ್ಲ ಈ ನಾಲಿಗೆಯ ಪರಿಯ!’

-ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News