ಪ್ರಧಾನಿ ಮೋದಿಯ ಅಸಮರ್ಥ ಆರ್ಥಿಕ ನೀತಿಗಳಿಂದ ಜಿಡಿಪಿ ಕುಸಿತ: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-09-01 15:20 GMT

ಬೆಂಗಳೂರು, ಸೆ.1: ಭಾರತದ ಜಿಡಿಪಿ ಎಪ್ರಿಲ್-ಜೂನ್ ನಲ್ಲಿ ಶೇ.23ರಷ್ಟು ಋಣಾತ್ಮಕವಾಗಿದೆ. ದೇಶದಲ್ಲಿ ಈ ಅವಧಿಯಲ್ಲಿ ದೊಡ್ಡಮಟ್ಟದಲ್ಲಿ ಉದ್ಯೋಗ ನಷ್ಟ ಹಾಗೂ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ನೀತಿಗಳಿಂದ ಇದನ್ನು ಎದುರಿಸುವಲ್ಲಿ ವಿಫಲವಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ವಿಶ್ವದ ಇತರ ಬಲಿಷ್ಠ ಆರ್ಥಿಕ ಶಕ್ತಿಗಳಿಗೆ ಹೋಲಿಸಿದರೆ ಭಾರತದ ಜಿಡಿಪಿ ಬೆಳವಣಿಗೆಯು ಅತ್ಯಂತ ಕಳಪೆಯಾಗಿದೆ. ಇತರೆ ದೇಶಗಳು ಕಟ್ಟುನಿಟ್ಟಿನ ಲಾಕ್‍ಡೌನ್ ಘೋಷಿಸಿದ್ದರೂ ತಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಅಸಮರ್ಥ ನೀತಿಗಳಿಗೆ ಇದು ಮತ್ತೊಂದು ಉದಾಹರಣೆಯಾಗಿದೆ ಎಂದು ದೂರಿದ್ದಾರೆ.

ಜಿಡಿಪಿ ಬೆಳವಣಿಗೆಯು ಕಳೆದ 6 ವರ್ಷಗಳಿಂದ ಮೇಲ್ಮುಖವಾಗಿ ಚಲಿಸಿಲ್ಲ. ಆದರೆ, ನರೇಂದ್ರ ಮೋದಿ ತಮ್ಮ ಜನಪ್ರಿಯ ಹಾಗೂ ಅವೈಜ್ಞಾನಿಕವಾದ ಆಲೋಚನೆಗಳನ್ನು ಅನ್ವೇಷಿಸುವಲ್ಲಿ ಮಾತ್ರ ವಿಫಲವಾಗಿಲ್ಲ. ಲಾಕ್‍ಡೌನ್ ಅನಿವಾರ್ಯವಾಗಿತ್ತು. ಆದರೆ, ಅದನ್ನು ಘೋಷಿಸಿದ ಸಮಯ ಹಾಗೂ ಸರಿಯಾಗಿ ಅನುಷ್ಠಾನಗೊಳಿಸಿರಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬಹುಮುಖ ಬೆಲೆಯ ನೋಟುಗಳ ಅಮಾನ್ಯ, ಜಿಎಸ್‍ಟಿ ಜಾರಿ, ಅಸಮರ್ಥ ಆರ್ಥಿಕ ನೀತಿಗಳು, ಅಂತರ್ ರಾಷ್ಟ್ರೀಯ ಸಂಬಂಧಗಳನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದ್ದು, ಹಾಗೂ ಅಸಮರ್ಥ ಸಚಿವರಿಂದಾಗಿ ಜಿಡಿಪಿ ಶೇ.23ರಷ್ಟು ಇಳಿಮುಖವಾಗಿದೆ. ಆದರೆ, ನಿಮ್ಮ ಸಚಿವರು ‘ಇದು ದೇವರ ಆಟ’ ಎಂದು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News