ರಾಷ್ಟ್ರಕವಿ ಆಯ್ಕೆ ಸಮಿತಿ ರಚನೆಗೆ ಕಸಾಪ ಒತ್ತಾಯ

Update: 2020-09-01 14:35 GMT
ಮನು ಬಳಿಗಾರ್

ಬೆಂಗಳೂರು, ಸೆ.1: ರಾಜ್ಯ ಸರಕಾರ ಕೂಡಲೇ ರಾಷ್ಟ್ರಕವಿ ಆಯ್ಕೆ ಸಮಿತಿ ರಚಿಸಿ, ಪುರಸ್ಕಾರಕ್ಕೆ ಅರ್ಹರನ್ನು ಘೋಷಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಷ್ಟ್ರಕವಿ ಗೌರವಕ್ಕೆ ಯೋಗ್ಯರಾದವರು ಕನ್ನಡದಲ್ಲಿ ಬೇಕಾದಷ್ಟು ಸಾಹಿತಿಗಳು ಇದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಈ ಪದವಿಗೆ ಯೋಗ್ಯರಾದವರನ್ನು ಕಳೆದುಕೊಂಡಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ಈ ಗೌರವ ಪದವಿ ಇರಬೇಕು ಎನ್ನುವುದರ ಪರವಾಗಿ ಇದೆ. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಕವಿ ಪುರಸ್ಕಾರ ಕೊಡುವ ಪದ್ಧತಿಯನ್ನು ಮುಂದುವರಿಸಬೇಕು ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.

ರಾಷ್ಟ್ರಕವಿ ಗೌರವವನ್ನು ಯಾರಿಗೆ ಕೊಡಬೇಕು ಎಂಬುದು ಸರಕಾರಕ್ಕೆ ಬಿಟ್ಟ ವಿಚಾರ. ಈ ಗೌರವ ಕೇವಲ ಕಾವ್ಯ ಬರೆದವರಿಗೆ ಸಲ್ಲಬೇಕು ಎಂದೂ ಇಲ್ಲ. ಹೀಗಾಗಿ, ಕನ್ನಡದಲ್ಲಿ ಈ ಗೌರವಕ್ಕೆ ಅರ್ಹರಾದವರು ಇಲ್ಲ ಎಂದು ಭಾವಿಸುವುದು ಒಂದೂವರೆ ಸಾವಿರ ವರ್ಷಗಳ ಲಿಖಿತ ಸಾಹಿತ್ಯ ಪರಂಪರೆಯ ಇತಿಹಾಸ ಇರುವ, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿರುವ ಭಾಷೆಗೆ ಮಾಡಿದ ಅವಮಾನ. ಈ ನಿಟ್ಟಿನಲ್ಲಿ ಕನ್ನಡದ ಕವಿ, ಸಾಹಿತಿಯೊಬ್ಬರಿಗೆ ಸಲ್ಲಬೇಕಾದ ಈ ಗೌರವಕ್ಕೆ ಅರ್ಹರಾದ ಹೆಸರನ್ನು ಸರಕಾರ ಘೋಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News