ಚಿಕ್ಕಮಗಳೂರು ಜಿಲ್ಲಾದ್ಯಂತ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Update: 2020-09-01 14:42 GMT

ಚಿಕ್ಕಮಗಳೂರು, ಸೆ.1: ಜಿಲ್ಲೆಯಲ್ಲಿ ಕಳೆದ ಕೆಲ ಮೂರು ವಾರಗಳಿಂದ ನಾಪತ್ತೆಯಾಗಿದ್ದ ಮಳೆ ಮಂಗಳವಾರ ಮಧ್ಯಾಹ್ನದ ವೇಳೆ ದಿಢೀರ್ ಸುರಿಯಿತು. ಸುಮಾರು 1 ಗಂಟೆಗಳ ಕಾಲ ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿದ ಮಳೆಯ ಆರ್ಭಟ ಮಧ್ಯಾಹ್ನದ ಬಳಿಕ ತಣ್ಣಗಾಯಿತು.

ಜಿಲ್ಲೆಯಾದ್ಯಂತ ಕಳೆದ ಆಗಸ್ಟ್ ತಿಂಗಳಲ್ಲಿ ಸುಮಾರು 1 ವಾರಗಳ ಕಾಲ ಮಳೆ ಆರ್ಭಟಿಸಿತ್ತು. ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಮನೆಗಳು, ಆಸ್ತಿ ನಷ್ಟ, ಬೆಳೆ ನಾಶ ಸಂಭವಿಸಿತ್ತು. ತುಂಗಾ, ಭದ್ರಾ ನದಿಗಳು ತುಂಬಿ ಹರಿದಿದ್ದು, ಜಮೀನುಗಳಿಗೆ ನದಿಗಳ ನೆರೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿತ್ತು. ನದಿಯಲ್ಲಿ ಕೊಚ್ಚಿ ಹೋಗಿ ಹಲವರು ಮೃತಪಟ್ಟ ಘಟನೆಗಳೂ ನಡೆದಿದ್ದವು. ಕಳೆದ ಬಾರಿಯ ಅತಿವೃಷ್ಟಿಯಿಂದಾಗಿ ಸಂಭವಿಸಿದ್ದ ಅಪಾರ ನಷ್ಟ ಈ ಬಾರಿಯೂ ಸಂಭವಿಸಲಿದೆ ಎಂದು ಮಲೆನಾಡಿನ ಜನರ ಆತಂಕಕ್ಕೊಳಗಾಗಿದ್ದರು. ಆದರೆ ವರುಣಾರ್ಭಟ ಕೇವಲ ಒಂದೇ ವಾರಕ್ಕೆ ನಿಂತಿದ್ದರಿಂದ ಜನರು ನಿಟ್ಟುಸಿರು ಬಿಟ್ಟಿದ್ದರು.

ಸದ್ಯ ಸುಮಾರು 15 ದಿನಗಳ ಬಳಿಕ ಕಾಫಿನಾಡಿನಲ್ಲಿ ದಿಢೀರ್ ಮಳೆಯಾಗಿದೆ. ಹವಾಮಾನ ಇಲಾಖೆಯ ಪ್ರಕಟನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಮನ್ಸೂಚನೆ ನೀಡಲಾಗಿತ್ತು. ಆದರೆ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಇತ್ತಾದರೂ ಕೆಲವೊಮ್ಮೆ ಗುಡುಗಿನ ಶಬ್ದ ಕೇಳಿ ಬಂತೇ ಹೊರತು ಮಳೆಯಾದ ಬಗ್ಗೆ ವರದಿಯಾಗಿಲ್ಲ. ಆದರೆ ಸೋಮವಾರ ಬೆಳಗ್ಗೆಯಿಂದಲೇ ದಟ್ಟ ಮೋಡ ಜಿಲ್ಲಾದ್ಯಂತ ಆವರಿಸಿದ್ದು, ಮಳೆಯಾಗುವ ಮನ್ಸೂಚನೆ ಇತ್ತು. ನಿರೀಕ್ಷೆಯಂತೆ ಮಧ್ಯಾಹ್ನದ ವೇಳೆ ಏಕಾಏಕಿ ಮಳೆ ಸುರಿಯಿತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಸುಮಾರು 1 ಗಂಟೆಗಳ ಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ಸೇರಿದಂತೆ ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲೂ ಮಂಗಳವಾರ ಧಾರಾಕಾರ ಮಳೆ ಸುರಿದಿದೆ. ಚಿಕ್ಕಮಗಳೂರು ನಗರದಲ್ಲಿ ಸುರಿದ್ದ ಧಾರಾಕಾರ ಮಳೆಯಿಂದಾಗಿ ನಗರದಲ್ಲಿ ಕೆಲಹೊತ್ತು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ, ಜನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News