ದಲಿತರ ವಿರುದ್ಧದ ದೌರ್ಜನ್ಯಗಳು ಉತ್ತರ ಪ್ರದೇಶದಲ್ಲಿ ಜಂಗಲ್‌ರಾಜ್‌ ಪರಿಸ್ಥಿತಿಗೆ ಸಾಕ್ಷಿ: ಮಾಯಾವತಿ

Update: 2020-09-01 15:18 GMT

ಲಕ್ನೊ, ಸೆ.1: ಉತ್ತರಪ್ರದೇಶದ ಆಗ್ರಾ ಮತ್ತು ರಾಯ್ ‌ಬರೇಲಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ದಲಿತರು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ, ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣ ರಾಜ್ಯದಲ್ಲಿನ ಜಂಗಲ್‌ರಾಜ್ ಪರಿಸ್ಥಿತಿಗೆ ಪುರಾವೆಯಾಗಿದೆ ಎಂದಿದ್ದಾರೆ.

ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರದಡಿ ಎಲ್ಲಾ ಸಮುದಾಯದ ಜನತೆಯೂ ದೌರ್ಜನ್ಯ ಎದುರಿಸುತ್ತಿದ್ದರೂ, ದಲಿತರ ವಿರುದ್ಧ ನಿರಂತರ ನಡೆಯುತ್ತಿರುವ ಅನ್ಯಾಯ ತೀವ್ರ ಕಳವಳಕಾರಿಯಾಗಿದೆ . ಆಗ್ರಾ ಮತ್ತು ರಾಯ್‌ ಬರೇಲಿಯಲ್ಲಿ ನಡೆದ ಘಟನೆಯಲ್ಲಿ ತಪ್ಪಿತಸ್ತರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಂಡು, ಜನತೆಯ, ವಿಶೇಷವಾಗಿ ಸಮಾಜದ ದುರ್ಬಲ ವರ್ಗದವರ ಸುರಕ್ಷತೆಯನ್ನು ಖಾತರಿಪಡಿಸಬೇಕು ಎಂದವರು ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ, ಆಗ್ರಾದಲ್ಲಿ ಕುಟುಂಬದ ಮೂವರು ಸದಸ್ಯರ ಹತ್ಯೆ ಪ್ರಕರಣ ದರೋಡೆಕೋರರ ಕೃತ್ಯವಾಗಿದ್ದು, ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಂತ್ರಸ್ತರ ಮನೆಯಿಂದ ಲೂಟಿ ಮಾಡಿದ್ದ ನಗದು ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಗ್ರ ಐಜಿಪಿ ಸತೀಶ್ ಗಣೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News