ಕನ್ನಡ ಭಾಷೆಯ ಮೇಲಿನ ಉದ್ಧಟತನ ಸರಿಯಲ್ಲ: ಟಿ.ಎಸ್.ನಾಗಾಭರಣ

Update: 2020-09-01 15:49 GMT

ಬೆಂಗಳೂರು, ಸೆ.1: ಹೊರನಾಡು, ಗಡಿನಾಡು ಕನ್ನಡಿಗರಿಗೆ ರಾಜ್ಯ ಸರಕಾರದ ಆದೇಶದನ್ವಯ ಶೇ.5ರಷ್ಟು ಸೀಟುಗಳನ್ನು ಕಾಯ್ದಿರಿಸಬೇಕೆಂಬ ಆದೇಶವಿದ್ದರೂ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಉಲ್ಲಂಘಿಸಿರುವುದು ರಾಜ್ಯಭಾಷಾ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಕನ್ನಡದ ನೆಲದಲ್ಲಿ ಹೀಗೆ ಉದ್ಧಟತನ ತೋರಿದ ಅಧಿಕಾರಿ, ನೌಕರರ ಮೇಲೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಬೀದರ್‍ನಲ್ಲಿರುವ ರಾಜ್ಯ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆಯನ್ನು ಮಂಗಳವಾರ ಜಾಲಸಂಪರ್ಕ ಸಭೆ(ಆನ್‍ಲೈನ್ ಸಭೆ)ಯನ್ನು ಅವರು ನಡೆಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮೊದಲ 2 ಸೆಮಿಸ್ಟರ್‍ ನಲ್ಲಿ ಕನ್ನಡವನ್ನು ಭೋದಿಸಲಾಗುತ್ತಿದೆ. ಆದರೆ ಬೀದರ್ ನಲ್ಲಿರುವ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮಾತ್ರ ಕನ್ನಡವನ್ನು ಬೋಧಿಸದೆ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ನಾಗಾಭರಣ ಕಿಡಿಗಾರಿದರು.

ಅಲ್ಲದೆ, ಈ ಸಂಬಂಧ ಪ್ರಾಧಿಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ಮಾಹಿತಿ ಪಡೆಯಲು ಹಲವು ಬಾರಿ ಪತ್ರ ಬರೆದರೂ ಯಾವುದೇ ಉತ್ತರವನ್ನೂ ನೀಡದೆ ಇರುವುದು ಉದ್ಧಟತನದ ಪರಮಾವಧಿಯಾಗಿದೆ ಎಂದು ನಾಗಾಭರಣ ಕಿಡಿಕಾರಿದರು.

ರಾಜ್ಯ ಸರಕಾರದ ಉನ್ನತ ಶಿಕ್ಷಣ ಪರಿಷತ್ತು 2016ರಿಂದಲೂ ಹಲವು ಸುತ್ತೋಲೆಗಳನ್ನು ಹೊರಡಿಸಿದೆ. ಕನ್ನಡ ಬೋಧನೆಯು ಅಂಕಗಣನೆಗೆ ಒಳಪಟ್ಟು ಮೌಲ್ಯಮಾಪನ ಮಾಡಿ ಕಲಿಸಬೇಕು. ವಿಶ್ವವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳು ಕೆಳ ಸಂಸ್ಕೃತಿ ಮತ್ತು ಶ್ರಮಜೀವಿಗಳೊಂದಿಗೆ ಸಂವಹನ ನಡೆಸಬೇಕಿರುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸದಿದ್ದರೆ ನಾಳೆ ಅವರು ಈ ನೆಲದಲ್ಲಿ ಹೇಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ? ನೀವು ಕನ್ನಡಿಗರಲ್ಲವೇ, ನೀವು ಕನ್ನಡ ನೆಲದಲ್ಲಿಲ್ಲವೇ ಎಂದು ವಿವಿ ಕುಲಪತಿಗಳು ಮತ್ತು ಕುಲಸಚಿವರನ್ನು ನಾಗಾಭರಣ ತರಾಟೆಗೆ ತೆಗೆದುಕೊಂಡರು.

ಸರೋಜಿನಿ ಮಹಿಷಿ ವರದಿಯನ್ವಯ ಗುತ್ತಿಗೆ, ಹೊರಗುತ್ತಿಗೆಯವರನ್ನು ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಶೇ.100 ರಷ್ಟು ಕನ್ನಡಿರಿಗೆ ಅವಕಾಶ ನೀಡಬೇಕು ಎಂಬ ನಿಯಮವಿದೆ. ಅಷ್ಟಾದರೂ ಖಾಯಂ ನೇಮಕಾತಿಯಲ್ಲಿ ತಮಿಳುನಾಡಿನವರಿಗೆ ಅವಕಾಶ ನೀಡಿರುವ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ. ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಅವರು ಸೂಚಿಸಿದರು.

ವೃತ್ತಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಕನ್ನಡ ಭೋದನೆ ಕಡ್ಡಾಯ ಮಾಡಿ ಉನ್ನತ ಶಿಕ್ಷಣ ಪರಿಷತ್ತು ಈ ಬಗ್ಗೆ ಆದೇಶ, ಸುತ್ತೋಲೆಗಳನ್ನು ಹೊರಡಿಸಿದೆ. ಅಷ್ಟಾದರೂ ತಮ್ಮ ವಿವಿಯಲ್ಲಿ ಕನ್ನಡ ಪಠ್ಯ ಬೋಧನೆ ಮಾಡದಿರುವುದು ಎಷ್ಟು ಸರಿ ಎಂದು ನಾಗಾಭರಣ ಪ್ರಶ್ನಿಸಿದರು.

ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ನಾರಾಯಣಸ್ವಾಮಿ ಮಾತನಾಡಿ, ನಮ್ಮಿಂದ ತಪ್ಪುಗಳು ಆಗಿರುವುದು ನಿಜ. ಕನ್ನಡ ಪಠ್ಯಕ್ರಮ ಬೋಧನೆ ಸಂಬಂಧ ಕೂಡಲೇ ಕ್ರಮಕೈಗೊಳ್ಳಲಾಗುವುದು ಮತ್ತು ಜಾಲತಾಣವನ್ನು ಕನ್ನಡೀಕರಣಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಮತ್ತು 3 ತಿಂಗಳ ಒಳಗೆ ಕನ್ನಡದ ಪ್ರಗತಿಯ ವರದಿ ಪ್ರಾಧಿಕಾರಕ್ಕೆ ನೀಡುವುದಾಗಿ ಭರವಸೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಮುಖ್ಯಮಂತ್ರಿಯ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಹಂಪಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ, ರಾಜ್ಯ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾಮಿ, ಕುಲಸಚಿವ ಡಾ.ಕೆ.ಸಿ.ವೀರಣ್ಣ, ವಿಸ್ತರಣಾ ನಿರ್ದೇಶಕ ಡಾ.ಎನ್.ಎ.ಪಾಟೀಲ್, ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಸೆಂಥಿಲ್ ವೆಲ್, ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಶಿವಕುಮಾರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 20 ಮಂದಿ ವಿಶ್ವವಿದ್ಯಾಲಯ ಮಟ್ಟದ ಮುಖ್ಯಸ್ಥರು, ಮುಖ್ಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News