ಮನೆಯಲ್ಲಿದ್ದ ಎರಡು ಕೆಜಿ ಚಿನ್ನ ಕಳ್ಳತನ: ಪ್ರಕರಣ ದಾಖಲು

Update: 2020-09-01 17:52 GMT

ಮೈಸೂರು, ಸೆ.1: ಮನೆಯಲಿದ್ದ ಎರಡು ಕೆಜಿ ಚಿನ್ನ ಕಳ್ಳತನವಾಗಿರುವ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.

ಸರಸ್ವತಿಪುರಂನಲ್ಲಿರುವ 5ನೇ ಮುಖ್ಯ ರಸ್ತೆಯಲ್ಲಿ ವಿಜಿ ಕುಮಾರ್ ಮತ್ತು ವನಜಾಕ್ಷಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ವಿಜಿಕುಮಾರ್ ಉದ್ಯಮಿ ಆಗಿದ್ದು, ಅವರ ಪತ್ನಿ ವನಜಾಕ್ಷಿ ಮೈಸೂರು ನಗರ ಪೊಲೀಸ್ ವಿಭಾಗದಲ್ಲಿ ದಫೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಜಿ ಕುಮಾರ್ ಅವರಿಗೆ ಆ.17ರಂದು ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಅವರನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದೀಗ ಅವರ ತಾಯಿಗೂ ಕೊರೋನ ದೃಢಪಟ್ಟ ಹಿನ್ನೆಲೆ ಆಸ್ಪತ್ರೆಗೆ ಸೇರಿಸಲಾಗಿದ್ದು, ಈ ಮಧ್ಯೆ ಸೋಮವಾರ ಮಧ್ಯಾಹ್ನ ಅವರನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಮನೆಯಲ್ಲಿದ್ದ 2 ಕೆಜಿಯಷ್ಟು ಚಿನ್ನಾಭರಣವನ್ನು ಕ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ.

ಒಂದೂವರೆ ಕೆಜಿಯಷ್ಟು ಚಿನ್ನಾಭರಣ ಇವರದ್ದಾಗಿದ್ದು, ಮತ್ತೆ ಅರ್ಧ ಕೆಜಿಯಷ್ಟು ಚಿನ್ನ ಇವರ ಸಂಬಂಧಿಕರು ತಮ್ಮ ಮನೆ ರಿಪೇರಿಯಲ್ಲಿದೆ ಎಂದು ಇವರ ಮನೆಯಲ್ಲಿ ಇರಿಸಿದ್ದರು ಎನ್ನಲಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿಜಯ್ ಕುಮಾರ್ ಮತ್ತು ಭವ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಕೂಡ ಆಗಮಿಸಿ ಪರಿಶೀಲನೆ ನಡೆಸಿದೆ. ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಸರಸ್ವತಿಪುರಂಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News