ಸಕಲೇಶಪುರ: ಕಾಡಾನೆ ತುಳಿತಕ್ಕೆ ವ್ಯಕ್ತಿ ಸಾವು; ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ

Update: 2020-09-01 18:31 GMT

ಸಕಲೇಶಪುರ: ಕಾಡಾನೆ ತುಳಿತಕ್ಕೆ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತ್ಪಟ್ಟ ಘಟನೆ ಮಂಗಳವಾರ ಮುಂಜಾನೆ ಕೊಲ್ಲಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅರ್ಚಕ ಆಸ್ತಿಕ ಭಟ್ (52) ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿ. ಇವರು ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಬೆಳಗ್ಗೆ 5.30ರ ಸಮಯದಲ್ಲಿ ಶೌಚಾಲಯಕ್ಕೆಂದು ಮನೆಯಿಂದ ಹೊರಬಂದಾಗ ಅಂಗಳದಲ್ಲಿ ಇದ್ದ ಆನೆ ಸೊಂಡಿಲಿಂದ ಎತ್ತಿ ಎಸೆದು, ತುಳಿದು ಹತ್ಯಗೈದಿದೆ. ಕಳೆದ ಒಂದು ತಿಂಗಳಿಂದ ಇದೇ ಗ್ರಾಮದ ಸುತ್ತಮುತ್ತ ಸುಮಾರು ಹಲವು ಕಾಡಾನೆಗಳು ಅಡ್ಡಾಡುತ್ತಾ ಬೆಳೆ ಹಾಗೂ ಆಸ್ತಿ ಪಾಸ್ತಿ ಹಾನಿ ಮಾಡುತ್ತಿದ್ದು, ಇದೀಗ ಜೀವಹಾನಿ ಆಗಿದೆ.

ಶಾಸಕ ಎಚ್‌.ಕೆ. ಕುಮಾರಸ್ವಾಮಿ, ಜಿಲ್ಲಾಧಿಕಾರಿ ಗಿರೀಶ್‌, ಜಿ.ಪಂ. ಸಿಇಓ ಪರಮೇಶ್‌, ಉಪವಿಭಾಗಾಧಿಕಾರಿ ಎಂ. ಗಿರೀಶ್‌ ನಂದನ್‌, ತಹಶೀಲ್ದಾರ್‌ ಮಂಜುನಾಥ್‌ ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ 2 ಲಕ್ಷ ರೂಪಾಯಿ ಪರಿಹಾರದ ಚೆಕ್‌ ವಿತರಣೆ ಮಾಡಿದರು. ಉಳಿದ 5.50 ಲಕ್ಷ ಪರಿಹಾರದ ಹಣ ನೀಡಲಾಗುವುದು ಎಂದು ಶಾಸಕರು ಹೇಳಿದರು.

ಪ್ರತಿಭಟನೆ: ಆಸ್ತಿಕ್‌ ಭಟ್‌ ಮೃತಪಟ್ಟ ಘಟನೆಯೂ ಸೇರಿದಂತೆ ಕಳೆದ ಒಂದು ದಶದಿಂದ ಈ ಭಾಗದಲ್ಲಿ ಕಾಡಾನೆಗಳಿಂದ ಜೀವ, ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಖಂಡಿಸಿ ಪಟ್ಟಣದಲ್ಲಿ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ಅಧ್ಯಕ್ಷ ತೋ.ಚಾ. ಅನಂತಸುಬ್ಬರಾಯ ಮಾತನಾಡಿ, ಎಲ್ಲಾ ಕಾಡಾನೆಗಳಿಗೂ ರೇಡಿಯೋ ಕಾಲರ್‌ ಅಳವಡಿಸುವುದಾಗಿ ಟಾಸ್ಕ್‌ಪೋರ್ಸ್‌ ಸಭೆಯಲ್ಲಿ ತೀರ್ಮಾನ ಆಗಿದೆ. ಆದರೆ ಈವರೆಗೂ ಆ ಕೆಲಸ ಆಗಿಲ್ಲ. ಜಿಲ್ಲೆಯ ಸುಮಾರು 1.25 ಲಕ್ಷ ಎಕರೆ ರೈತರ ತೋಟ ಗದ್ದೆಗಳಲ್ಲಿಯೇ ಸುಮಾರು 60ಕ್ಕೂ ಹೆಚ್ಚು ಕಾಡಾನೆಗಳು ವಾಸ್ತವ್ಯ ಹೂಡಿವೆ. ಕಳೆದ 15 ವರ್ಷಗಳಿಂದ ನಿತ್ಯ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡುತ್ತಲೇ ಇವೆ. ರೈತರು, ಕಾರ್ಮಿಕರು ಸೇರಿದಂತೆ 30ಕ್ಕೂ ಹೆಚ್ಚು ಜೀವ ಹಾನಿಮಾಡಿವೆ. ಶಾಶ್ವತ ಪರಿಹಾರ ರೂಪಿಸುವಂತೆ, ಪ್ರತಿಭಟನೆ, ಮನವಿ, ಹಲವು ಸಭೆಗಳಲ್ಲಿ ಚರ್ಚೆ ಮೂಲಕ ಸಮಸ್ಯೆಯ ಗಂಭೀರತೆಯನ್ನು ಸರ್ಕಾರದ ಗಮನಕ್ಕೆ ತಂದರೂ ಸಮಸ್ಯೆ ಪರಿಹರಿಸದ ಕಾರಣ ಸಾವಿನ ಸಂಖ್ಯೆ ದಾಖಲಿಸುತ್ತಾ ಹೋಗಬೇಕಾಗಿರುವುದು ವ್ಯವಸ್ಥೆಯ ವೈಫಲ್ಯ ಎಂದು ಆರೋಪಿಸಿದರು.

ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪುಂಡಾನೆಗಳನ್ನು ಕೂಡಲೆ ಹಿಡಿದು ಸ್ಥಳಾಂತರ ಮಾಡಬೇಕು, ಆನೆ ದಾಳಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಸರಿಯಾಗಿ ಪರಿಹಾರವನ್ನು ಸರ್ಕಾರ ನೀಡುತ್ತಿಲ್ಲ. ಇದರಿಂದಾಗಿ ಕಾಡಾಣೆಗಳಿಂದ ಬೆಳೆ ನಷ್ಟಕ್ಕೆ ಒಳಗಾದ ಬಹುತೇಕ ರೈತರು ಇತ್ತೀಚೆಗೆ ಪರಿಹಾರಕ್ಕಾಗಿ ಅರ್ಜಿಗಳನ್ನು ಸಲ್ಲಿಸುವುದನ್ನೇ ಕೈಬಿಟ್ಟಿದ್ದಾರೆ. ರೈತರ ಬದುಕು ತೀರಾ ಸಂಕಷ್ಟದಲ್ಲಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಆಗಲೇ ಬೇಕು ಎಂದು ಆಗ್ರಹಿಸಿದರು.

ತಾ.ಪಂ. ಸದಸ್ಯ ಯಡೇಹಳ್ಳಿ ಆರ್. ಮಂಜುನಾಥ್‌ ಮಾನಾಡಿ, ಕಳೆದ ಒಂದು ದಶಕದಿಂದಲೂ ಕಾಡಾನೆ ಸಮಸ್ಯೆ ಬಗ್ಗೆ ರೈತರು, ಸಂಘಟನೆಗಳು ಪ್ರತಿಭಟನೆ ಮಾಡುತ್ತಲೇ ಬಂದಿವೆ. ಅಧಿಕಾರಿಗಳು, ಸಚಿವರು, ಸರ್ಕಾರ ಬದಲಾಗುತ್ತಲೇ ಇದೆ. ಯಾರೂ ಸಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೆ ಭರವಸೆ ನೀಡಿ ಕಾಲ ದೂಡುತ್ತಿರುವುದಕ್ಕೆ ಧಿಕ್ಕಾರವಿರಲಿ. ಸಮಸ್ಯೆ ಬಗೆಹರಿಸದೇ ಹೋದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಗಿರೀಶ್‌ ಭೇಟಿ ನೀಡಿ ಮನವಿ ಆಲಿಸಿದರು. ಕಾಡಾನೆಗಳಿಂದ ಈ ಭಾಗದಲ್ಲಿ ಉಂಟಾಗುತ್ತಿರುವ ಸಮಸ್ಯೆ, ದಶಕದ ನಿಮ್ಮಗಳ ಹೋರಾಟಕ್ಕೆ ಈವರೆಗೂ ಪರಿಹಾರ ದೊರೆಯದೆ ಇರುವುದಕ್ಕೆ  ನನಗೂ ತುಂಬಾ ನೋವಿದೆ. ಒಂದು ವಾರದೊಳಗೆ ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಬೆಳೆಗಾರರ ಸಂಘಟನೆ ಒಳಗೊಂಡಂತೆ ತುರ್ತು ಸಭೆ ನಡೆಸಲಾಗುವುದು. ಕಾನೂನು ವ್ಯಾಪ್ತಿ ಒಳಗೆ ಒಂದು ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಬಾಳೇಗದ್ದೆ ಬಡಾವಣೆ ಗುಹೆ ಕಲ್ಲಮ್ಮ ದೇವಸ್ಥಾನದಿಂದ ಉಪವಿಭಾಗಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಶಾಸಕ ಎಚ್.ಕೆ. ಕುಮಾರಸ್ವಾಮಿ, ಜಿ.ಪಂ. ಸದಸ್ಯೆ ಚಂಚಲಕುಮಾರಸ್ವಾಮಿ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಎಚ್‌.ಎಚ್‌. ಉದಯ್‌, ಕರ್ನಾಟಕ ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್‌, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಾಳ್ಳು ದಿನೇಶ್‌, ರಕ್ಷಣಾ ವೇದಿಕೆ ಸ್ವಾಭಿಮಾಜಿ ಸೇನೆ ಅಧ್ಯಕ್ಷ ಸಾಗರ್‌ ಜಾನೇಕೆರೆ, ಸ.ಬ. ಭಾಸ್ಕರ್‌, ಬಾಳ್ಳು ರೋಹಿತ್‌, ಹುರುಡಿ ಅರುಣ್‌ಕುಮಾರ್‌ ಸೇರಿದಂತೆ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News