ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಪಂಜಾಬ್ ಮಾದರಿ ಅನುಸರಿಸಲು ಎಚ್.ವಿಶ್ವನಾಥ್ ಆಗ್ರಹ

Update: 2020-09-02 18:37 GMT

ಮೈಸೂರು,ಸೆ.2: ಡ್ರಗ್ಸ್ ಮಾಫಿಯಾದಲ್ಲಿ ಯಾರೇ ತೊಡಗಿದ್ದರು ಮಡಿವಂತಿಕೆ ಬಿಟ್ಟು ಅವರನ್ನು ಬಹಿರಂಗಗೊಳಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರವನ್ನು ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ಮಾಫಿಯ ಇಂದಿನದಲ್ಲ ಬಹಳ ವರ್ಷಗಳಿಂದ ನಡೆಯುತ್ತಾ ಬಂದಿದೆ. ಈ ವಿಚಾರ ಪೊಲೀಸರಿಗೆ ಗೊತ್ತಿಲ್ಲ ಎಂದಲ್ಲ. ಈ ವಿಚಾರದಲ್ಲಿ ಯಾರ ಮೇಲೂ ಬೊಟ್ಟು ಮಾಡದೆ ಯಾರು ಇದಕ್ಕೆ ಬಲಿಯಾಗಿದ್ದಾರೊ ಅವರು ಎಷ್ಟೇ ಪ್ರಭಾವಿಗಳಾದರು ಅವರನ್ನು ಬೆತ್ತಲುಗೊಳಿಸಬೇಕು ಎಂದು ಹೇಳಿದರು.

ಡ್ರಗ್ಸ್ ಮಾಫಿಯಾದಲ್ಲಿ ನನ್ನ ಮಗನೇ ತಪ್ಪು ಮಾಡಿದ್ದರೆ ಶಿಕ್ಷಕೊಡಲಿ. ರಾಜ್ಯದ ಅಧಿಕಾರಿಗಳಾಗಲಿ, ರಾಜಕಾರಣಿಯಾಗಲಿ ಅಥವಾ ಉದ್ಯಮಿಗಳಾಗಲಿ ಯಾರು ಈ ಜಾಲಕ್ಕೆ ಬಲಿಯಾಗಿದ್ದಾರೋ ಅವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಡ್ರಗ್ಸ್ ಮಾಫಿಯಾ ನಮಗರಿವಿಲ್ಲದೆ ನಮ್ಮ ನಡುವೆ ಬೆಳೆದು ನಿಂತಿದೆ. ಈ ಜಾಲ ಸೆಲೆಬ್ರಿಟಿಗಳ ವರೆಗೂ ತಲುಪಿ ಅದೇ ಒಬ್ಬ ಸೆಲೆಬ್ರಿಟಿ ಡ್ರಗ್ಸ್ ಮಾಫಿಯಾ ಜಾಲವನ್ನು ಬಯಲು ಮಾಡಿದ್ದಾರೆ. ಅವರಿಗೆ ಪೊಲೀಸ್ ರಕ್ಷಣೆ ಕೊಟ್ಟರೆ ಇನ್ನಷ್ಟು ಬಯಲು ಮಾಡುವುದಾಗಿ ಹೇಳಿದ್ದಾರೆ. ಪೊಲೀಸರು ಮಾಡಬೇಕಾದ ಕೆಲಸವನ್ನು ಇಂದ್ರಜಿತ್ ಲಂಕೇಶ್ ಮಾಡಿರುವುದು ವಿಶೇಷ ಮತ್ತು ಸೋಜಿಗ ಎಂದು ಹೇಳಿದರು.

ಪೊಲೀಸರು ಇಂದು ಸಮಾಜದ ಎದುರಿಗೆ ತಲೆಬಾಗಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಗೊತ್ತಿದ್ದು ಗೊತ್ತಿಲ್ಲದೆ ಇದ್ದ ಪೊಲೀಸರು ಇಂದ್ರಜಿತ್ ಲಂಕೇಶ್ ಬಯಲು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಪೊಲೀಸ್ ಇಲಾಖೆ ರಾಜ್ಯದಲ್ಲಿ ನಡೆಯುವ ಅಕ್ರಮಗಳು ಗೊತ್ತಿಲ್ಲದ್ದು ಇಲ್ಲ, ದಂಡು ಪಾಳ್ಯ ಗ್ಯಾಂಗ್ ಎಲ್ಲಿದೆ, ಪಿಕ್ ಪಾಕೆಟರ್ಸ್ ಎಲ್ಲಿದ್ದಾರೆ, ಬೀಗ ಮುರಿಯುವವರು, ಚಿನ್ನ, ಬೆಳ್ಳಿ ಕಳ್ಳತನ ಮಾಡುವವರು ಯಾರು, ಖೋಟಾ ನೋಟು ಪ್ರಿಂಟ್ ಮಾಡುವವರು ಯಾರು, ನಕಲಿ ಮಧ್ಯ ತಯಾರು ಎಲ್ಲಿಂದ ಆಗುತ್ತದೆ, ಎಲ್ಲವೂ ಗೊತ್ತು ಆದರೂ ಅವರು ಸುಮ್ಮನಿದ್ದರು. ಇದೆಲ್ಲವನ್ನು ಇಂದ್ರಜಿತ್ ಲಂಕೇಶ್ ಹೇಳಬೇಕಾಗಿ ಬಂತು ಎಂದು ಹೇಳಿದರು.

ಪಂಜಾಬ್ ರಾಜ್ಯ ಕೂಡ ಡ್ರಗ್ಸ್ ದಂಧೆಯಿಂದ ನಲುಗಿ ಹೋಗಿತ್ತು. ಅಲ್ಲಿನ ಮುಖ್ಯಮಂತ್ರಿಗಳು ಅದನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ನಮ್ಮ ರಾಜ್ಯದ ರಾಜಕಾರಣಿಗಳು, ಮನೋರೋಗ ತಜ್ಞರು, ಪತ್ರಕರ್ತರು, ಸಮಾಜಮುಖಿ ಕೆಲಸ ಮಾಡುವವರ ತಂಡ ರಚನೆ ಮಾಡಿ ಪಂಜಾಬ್‍ಗೆ ಹೋಗಿ ಅಧ್ಯಯನ ಮಾಡಿಕೊಂಡು ಬಂದು ನಮ್ಮ ರಾಜ್ಯದಲ್ಲೂ ಕಂಟ್ರೋಲ್‍ಗೆ ತರಬೇಕು ಎಂದು ಸಲಹೆ ನೀಡಿದರು.

ಇಂತಹ ಒಂದು ದಂಧೆಯನ್ನು ಹತ್ತಿಕ್ಕಲೇ ಬೇಕು. ಯಾರ್ಯಾರು ಇದ್ದಾರೆ ಅನ್ನೋದು ಬಹಿರಂಗವಾಗಬೇಕು. ರಾಜಕಾರಣಿಗಳ, ಚಿತ್ರರಂಗದವರ, ಉದ್ಯಮಿಗಳ ಮಕ್ಕಳ ದೌಡಲು ಎಲ್ಲರಿಗೂ ತಿಳಿಯಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಯಾರು ಇದರ ಹಿಂದೆ ಇದ್ದಾರೆ ಎಂಬುದನ್ನು ಮಡಿವಂತಿಕೆ ಬಿಟ್ಟು ಹೇಳಬೇಕು ಎಂದು ಹೇಳಿದರು.

ವಿದೇಶಿ ಪ್ರಜೆಗಳ ಮೇಲೆ ಕ್ರಮ ಏಕಿಲ್ಲ: ವಿಶ್ವನಾಥ್ ಪ್ರಶ್ನೆ
ಅವಧಿ ಮುಗಿದರೂ ನಮ್ಮ ರಾಜ್ಯದಲ್ಲಿ ವಿದೇಶಿ ಪ್ರಜೆಗಳು ಲೀಲಾ ಜಾಲವಾಗಿ ಓಡಾಡಿಕೊಂಡಿದ್ದಾರೆ. ಹಾಗಿದ್ದ ಮೇಲೆ ಇವರ ಮೇಲೆ ನಿಗ ಇಡುವ ಪೊಲೀಸ್ ಸೆಲ್ ಏಕೆ ಕ್ರಮ ಕೈಗೊಂಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.

ವಿದೇಶಿ ಪ್ರಜೆಗಳ ಮೇಲೆ ನಿಗಾ ಇಡಲೆಂದು ಪೊಲೀಸ್ ಇಲಾಖೆಯ ಒಂದು ವಿಭಾಗ ಕೆಸಲ ಮಾಡುತ್ತಿದೆ. ಅದೇ ರೀತಿ ಡ್ರಗ್ಸ್ ಮಾಫಿಯಾದಂತ ಅಕ್ರಮಗಳನ್ನು ಪತ್ತೆ ಹಚ್ಚಲೆಂದೇ ಒಂದು ವಿಭಾಗ ಇದೆ. ಇವರೆಲ್ಲರೂ ಏನು ಮಾಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ದೇಶದಿಂದ ಬಂದ ಅನಕೇರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ. ಬೆಂಗಳೂರು, ಮಂಗಳೂರು ನಗರಗಳಲ್ಲಿ ಇವರು ಅವಧಿ ಮುಗಿದಿದ್ದರೂ ಓಡಾಡಿಕೊಂಡು ಇದ್ದಾರೆ. ಇವರನ್ನೆಲ್ಲಾ ಅವರ ದೇಶಕ್ಕೆ ಕಳುಹಿಸುವ ಕೆಲಸವನ್ನು ಪೊಲೀಸರು ಮಾಡಬೇಕು. ವಿದೇಶಿಯ ಅನೇಕರು ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಪೊಲೀಸರು ಮತ್ತು ಕಂದಾಯ ಇಲಾಖೆ ಸರ್ಕಾರದ ಭಾಗ ಇವರು ಕ್ರಮಕೈಗೊಂಡರೆ ರಾಜಕಾರಣಿಗಳದ್ದು ಏನು ಇಲ್ಲ, ಆದರೆ ಇವರೇ ಕೆಲವು ರಾಜಕಾರಣಿಗಳ ಪ್ರಭಾವಕ್ಕೆ ಬಲಿಯಾಗಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News