ಕನ್ನಡ ಭೋದಿಸದ ವಿಶ್ವವಿದ್ಯಾಲಯಗಳ ಮೇಲೆ ಕಠಿಣ ಕ್ರಮ: ಟಿ.ಎಸ್.ನಾಗಾಭರಣ

Update: 2020-09-03 11:12 GMT

ಬೆಂಗಳೂರು, ಸೆ.3: ಕನ್ನಡ ಭಾಷೆಯನ್ನು ಭೋದಿಸದ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಶ್ವವಿದ್ಯಾಲಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಕುರಿತಂತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಬೋಧನೆಯೆಡೆಗೆ ನಿರ್ಲಕ್ಷ್ಯ ತೋರುವುದು ಉದ್ಧಟತನವಾಗಿದೆ. ಹಾಗೂ ರಾಜ್ಯ ಭಾಷಾ ನೀತಿಯ ಉಲ್ಲಂಘಟನೆಯಾಗಿದೆ ಎಂದು ತಿಳಿಸಿದ್ದಾರೆ.

ಹೊರನಾಡು, ಗಡಿನಾಡು ಕನ್ನಡಿಗರಿಗೆ ಶೇ.5ರಷ್ಟು ಸೀಟುಗಳನ್ನು ಕಾಯ್ದಿರಿಸಬೇಕೆಂಬ ಆದೇಶವಿದ್ದರೂ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಉಲ್ಲಂಘಿಸಿದೆ. ಹಾಗೂ ಕನ್ನಡವನ್ನು ಭೋದಿಸುತ್ತಿಲ್ಲ ಎಂಬುದರ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ. ಇದು ಉದ್ಧಟತನದ ಪರಮಾವಧಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ, ಕಾನೂನು ವಿಶ್ವವಿದ್ಯಾಲಯ, ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮೊದಲ 2 ಸೆಮಿಸ್ಟರ್ ಗಳಲ್ಲಿ ಕನ್ನಡ ಭೋದಿಸಲಾಗುತ್ತಿದೆ. ಆದರೆ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಯಾಕೆ ಭೋದಿಸುತ್ತಿಲ್ಲ. ಹಾಗೂ ಗುತ್ತಿಗೆ-ಹೊರಗುತ್ತಿಗೆ ಆಧರಿಸಿ ನೇಮಕಾತಿ ಮಾಡುವಾಗ ಕನ್ನಡಿಗರಿಗೆ ಶೇ.100ರಷ್ಟು ಹುದ್ದೆಗಳನ್ನು ಮೀಸಲಿರಿಸಬೇಕು. ಅದನ್ನು ಉಲ್ಲಂಘಿಸಲಾಗಿದೆ ಎಂದು ಅವರು ಪ್ರಶ್ನಿಸಿದರು.

ಪ್ರಾಧಿಕಾರದ ಅಧ್ಯಕ್ಷರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾ,ಮಿ, ಕಾರಣಾಂತರಗಳಿಂದ ತಪ್ಪಾಗಿದೆ. ಮುಂದಿನ ಮೂರು ತಿಂಗಳಲ್ಲಿ ಕನ್ನಡ ಬೋಧನೆ ಹಾಗೂ ಅಂತರ್‍ಜಾಲದಲ್ಲಿ ಕನ್ನಡ ಅಳವಡಿಕೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಅವರು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News