ಎನ್‌ಪಿಎನಿಂದ ಬ್ಯಾಂಕ್ ಖಾತೆಗಳಿಗೆ ಸುಪ್ರೀಂ ತಾತ್ಕಾಲಿಕ ರಕ್ಷಣೆ

Update: 2020-09-03 17:05 GMT

ಹೊಸದಿಲ್ಲಿ,ಸೆ.3: ಈ ವರ್ಷದ ಆಗಸ್ಟ್ 31ರವರೆಗೆ ಅನುತ್ಪಾದಕ ಆಸ್ತಿಗಳೆಂದು ಘೋಷಿಸಿರದ ಬ್ಯಾಂಕ್ ಖಾತೆಗಳನ್ನು ಮುಂದಿನ ಆದೇಶದವರೆಗೆ ಎನ್‌ಪಿಎ ಎಂದು ಘೋಷಿಸಬಾರದು ಎಂಬುದಾಗಿ ಸುಪ್ರೀಂಕೋರ್ಟ್ ಗುರುವಾರ ಸೂಚಿಸಿದೆ.

   ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಹಿನ್ನೆಲೆಯಲ್ಲಿ ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಲಾಗಿರುವ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿರುವ ಸಾಲದ ಕಂತುಗಳ ಮೇಲೆ ಬಡ್ಡಿಯನ್ನು ವಿಧಿಸಬಾರದೆಂದು ಕೋರಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ನಡೆಸಿದ ಸಂದರ್ಭದಲ್ಲಿ ಈ ಆದೇಶ ನೀಡಿದೆ.

ಮರುಪಾವತಿಯಾಗದ ಸಾಲ ಅಥವಾ ಮುಂಗಡವನ್ನು ಅನುತ್ಪಾದಕ ಆಸ್ತಿ (ಎನ್‌ಪಿಎ) ಪರಿಗಣಿಸಲಾಗುತ್ತದೆ.

     ಬ್ಯಾಂಕ್‌ಗಳ ಸಂಘದ ಪರವಾಗಿ ವಾದಿಸಿ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡ ಸುಪ್ರೀಂಕೋರ್ಟ್ ಕನಿಷ್ಠ ಎರಡು ತಿಂಗಳ ಅವಧಿಗಾದರೂ ಯಾವುದೇ ಬ್ಯಾಂಕ್ ಖಾತೆಯನ್ನು ಎನ್‌ಪಿಎ ಆಗಿ ಪರಿವರ್ತಿಸಬಾರದು ಎಂದು ಸೂಚನೆ ನೀಡಿದೆ.

 ಸರ್ವೋಚ್ಚ ನ್ಯಾಯಾಲಯದ ಈ ಆದೇಶದಿಂದಾಗಿ, 2020ರ ಆಗಸ್ಟ್ 31ರವರೆಗೆ ಯಾವುದೇ ಖಾತೆಯನ್ನು ಮುಂದಿನ ಆದೇಶದವರೆಗೆ ಎನ್‌ಪಿಎ ಎಂದು ಪರಿಗಣಿಸಲಾಗುವುದಿಲ್ಲವೆಂದು ನ್ಯಾಯಾಧೀಶರಾದ ಆರ್.ಎಸ್.ರೆಡ್ಡಿ ಹಾಗೂ ಎಂ.ಆರ್.ಶಾ ಅವರನ್ನೂ ಒಳಗೊಂಡಿರುವ ನ್ಯಾಯಪೀಠ ತಿಳಿಸಿದೆ.

 ಕೇಂದ್ರ ಸರಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಬ್ಯಾಂಕಿಂಗ್ ವಲಯವು ಆರ್ಥಿಕತೆಯ ಬೆನ್ನೆಲುಬಾಗಿದೆ. ಕೊರೋನ ಸಾಂಕ್ರಾಮಿಕದಿಂದಾಗಿ ದೇಶದ ಪ್ರತಿಯೊಂದು ವಲಯ ಹಾಗೂ ಆರ್ಥಿಕತೆಯು ಒತ್ತಡಕ್ಕೀಡಾಗಿದೆಯೆಂದು ಅವರು ತಿಳಿಸಿದರು.

  ಸಾಲದ ಮೇಲಿನ ಬಡ್ಡಿದರವನ್ನು ರದ್ದುಪಡಿಸುವುದು ಆರ್ಥಿಕತೆಯ ಪುನಶ್ಚೇತನಕ್ಕೆ ಉತ್ತಮ ಆಯ್ಕೆಯಲ್ಲವೆಂಬುದನ್ನು ಲೋಕಾದ್ಯಂತ ಒಪ್ಪಿಕೊಳ್ಳಲಾಗುತ್ತಿದೆ ಎಂದು ಮೆಹ್ತಾ ತಿಳಿಸಿದರು. ಅರ್ಜಿದಾರರ ಅಹವಾಲುಗಳನ್ನು ಪ್ರಸ್ತಾವಿಸಿದ ನ್ಯಾಯಪೀಠವು, ಸಾಲ ಮರುಪಾವತಿ ಅವಧಿ ಮುಂದೂಡಿಕೆಯಿಂದ ಬಡ್ಡಿದರದ ಮೇಲೆ ಬಡ್ಡಿಯನ್ನು ವಿಧಿಸುವ ಕ್ರಮದ ಬಗ್ಗೆ ತನಗೆ ಆತಂಕವಿರುವುದಾಗಿ ಹೇಳಿತು ಮತ್ತು ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10ರವರೆಗೆ ಮುಂದೂಡಿತು.

ಸಾಲಮರುಪಾವತಿಯ ಅವಧಿ ವಿಸ್ತರಣೆಯ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿರುವ ಸಾಲದ ಕಂತುಗಳ ಮೇಲಿನ ಬಡ್ಡಿಯನ್ನು ರದ್ದುಪಡಿಸುವುದು ಸಾಲದ ಮೂಲಭೂತ ನಿಯಮಗಳಿಗೆ ವಿರುದ್ಧವಾದುದು ಹಾಗೂ ಇದರಿಂದ ನಿಯಮಿತವಾಗಿ ಸಾಲ ಮರುಪಾವತಿಸುವವರಿಗೆ ಅನ್ಯಾಯವಾದಂತಾಗುತ್ತದೆ ಎಂದು ಕೇಂದ್ರ ಸರಕಾರ ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News