ಕಳಸಾ ನಾಲಾ ತಿರುವು ಯೋಜನೆ: ಪರಿಸರ ಅನುಮತಿ ಕೋರಲು ಸೆ.13ರಂದು ಹೊಸದಿಲ್ಲಿಗೆ- ರಮೇಶ್ ಜಾರಕಿಹೊಳಿ

Update: 2020-09-04 18:22 GMT

ಬೆಳಗಾವಿ, ಸೆ.4: ಕಳಸಾ ನಾಲಾ ತಿರುವು ಯೋಜನೆ ಕುರಿತಂತೆ ಪರಿಸರ ಅನುಮತಿ ಕೋರಲು ಸೆ.13ರಂದು ಹೊಸದಿಲ್ಲಿಗೆ ಭೇಟಿ ನೀಡಲಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶುಕ್ರವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಈ ಹಿಂದೆ ಪರಿಸರ ಅನುಮತಿ ನೀಡಿತ್ತು. ಆದರೆ, ಅದು ಲ್ಯಾಪ್ಸ್ ಆಗಿದೆ. ಈ ನಡುವೆ, ಯೋಜನೆ ಕುರಿತಂತೆ ಹೊಸದಾಗಿ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಲಾಗಿತ್ತು. ಹೀಗಾಗಿ, ಪುನಹ ಅನುಮತಿ ಪಡೆಯಬೇಕಾಗಿದೆ ಎಂದು ತಿಳಿಸಿದರು.

ಜತೆಗೆ ಸಚಿವಾಲಯದ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸುವೆ. ಕಳಸಾ ನ್ಯಾಯಮಂಡಳಿಯ ಆದೇಶದ ಅನುಸಾರ ನೀರು ಪಡೆದುಕೊಳ್ಳಲು ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ನದಿಗಳ ಒತ್ತುವರಿಯಿಂದಲೂ ನೆರೆ ಉಂಟಾಗುತ್ತಿರಬಹುದು. ಇದು ವರದಿಯಿಂದಲೇ ಸ್ಪಷ್ಟವಾಗಬೇಕಾಗಿದೆ. ಹೀಗಾಗಿ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳು ಮತ್ತು ಬಳ್ಳಾರಿ ನಾಲಾ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವುದಕ್ಕಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು. 

ಪೀರನವಾಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಎಲ್ಲವೂ ನಮ್ಮ ಭಾಷೆಗಳೆ. ಹಾಗೇನಾದರೂ ಸಮಸ್ಯೆ ಇದ್ದಲ್ಲಿ ಮುಖಂಡರೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಹೇಳಿದರು.

ರಾಯಣ್ಣ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಹೋರಾಟಗಾರರು ಹಾಗೂ ಮರಾಠಿ ಭಾಷಿಗರ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳನ್ನೂ ವಾಪಸ್ ಪಡೆಯಲಾಗುವುದು. ಇದು ಜಿಲ್ಲಾ ಮಟ್ಟದಲ್ಲಿಯೇ ಬಗೆಹರಿಸಬಹುದಾದ ಸಮಸ್ಯೆಯಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News