34 ಸಾವಿರ ಮನೆಗಳು ಫಲಾನುಭವಿಗಳಿಗೆ ಹಸ್ತಾಂತರ: ಸಚಿವ ವಿ.ಸೋಮಣ್ಣ

Update: 2020-09-04 18:42 GMT

ಬೆಂಗಳೂರು, ಸೆ. 4: `ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರಕಾರ ಒಟ್ಟು 1.80 ಲಕ್ಷ ಮನೆಗಳನ್ನು ನೀಡಿ ನಾಲ್ಕು ವರ್ಷಗಳು ಕಳೆದರೂ ಅವುಗಳನ್ನು ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಾಧ್ಯವಾಗಿಲ್ಲ' ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಇದೀಗ 34,900 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ತೀರ್ಮಾನಿಸಿದೆ. ರಾಜ್ಯದ 188 ಕ್ಷೇತ್ರದಲ್ಲಿ 97,134 ಮನೆಗಳ ನಿರ್ಮಾಣ ಕಾಮಗಾರಿಯನ್ನು ಸೆ.16ರೊಳಗೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ರಾಜೀವ್‍ ಗಾಂಧಿ ವಸತಿ ನಿಗಮದಲ್ಲಿ 1.56 ಲಕ್ಷ ಮನೆಗಳನ್ನು ನೀಡಲು ತೀರ್ಮಾನಿಸಲಾಗಿದೆ. ಗ್ರಾಮೀಣ ಭಾಗದ ಬಡ ಜನತೆಗಾಗಿ ಒಂದು ಗ್ರಾಮ ಪಂಚಾಯತ್‍ಗೆ ತಲಾ 20 ಮನೆಗಳನ್ನು ನೀಡಲು ತೀರ್ಮಾನಿಸಲಾಗಿದೆ. 1,700ಕ್ಕೂ ಹೆಚ್ಚು ಕೊಳಗೇರಿಯಲ್ಲಿ 3.12 ಲಕ್ಷ ಮನೆಗಳನ್ನು ಸಕ್ರಮಗೊಳಿಸಲಾಗುತ್ತಿದೆ. ಏಳು ಸಾವಿರ ಎಕರೆಯಲ್ಲಿ ಮೂಲಭೂತ ಸೌಕರ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸೋಮಣ್ಣ ವಿವರ ನೀಡಿದರು.

ಕಾಮಗಾರಿಗೆ ಚಾಲನೆ: ಮೈಸೂರು ತಾಲೂಕಿನ ಇಲವಾಲ ಹೋಬಳಿಯ ವಿವಿಧ ಗ್ರಾಮದ 469 ಎಕರೆ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಅಭಿವೃದ್ಧಿಪಡಿಸಿದ ಕೆಆರ್‍ಎಸ್ ನಿಸರ್ಗ ವಸತಿ ಯೋಜನೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಭೂಮಾಲಕರಿಗೆ ಸಾಂತ್ವನ ನಿವೇಶನ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಡಾವಣೆಯಲ್ಲಿ ಸುಮಾರು 6,500 ವಿವಿಧ ವರ್ಗದ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಶೇ.90ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಆದರೆ, ಭೂಮಿ ಕಳೆದುಕೊಂಡ ರೈತರು ಸಾಂತ್ವನ ನಿವೇಶನಕ್ಕಾಗಿ ಆಗ್ರಹಿಸಿ ಯೋಜನೆಯ ಅನುಷ್ಠಾನಕ್ಕೆ ಅಡ್ಡಿಪಡಿಸಿದ ಪರಿಣಾಮ 2015ರಿಂದ 2019ರವರೆಗೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ನೀಡಲು ನಿರ್ಧರಿಸಲಾಗಿದ್ದು, ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.

ರಾಜ್ಯದ ಆರ್ಥಿಕ ಅಭಿವೃದ್ಧಿಗಾಗಿ ಸಾಲ ಮಾಡಬೇಕು ಎಂಬ ಸಿಎಂ ಹೇಳಿಕೆ ಸರಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಅತ್ಯಂತ ಸಮರ್ಥರಿದ್ದಾರೆ. ಅವರು ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸುತ್ತಾರೆ. ವಸತಿ ಇಲಾಖೆಗೆ ಯಾವುದೇ ಹಣಕಾಸಿನ ಹಣ ಕೊರತೆ ಇಲ್ಲ. ಹೀಗಾಗಿ ಪ್ರಗತಿಯಲ್ಲಿರುವ ಎಲ್ಲ ಯೋಜನೆ ಮತ್ತು ಹೊಸ ಯೋಜನೆಗಳನ್ನು ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ'

-ವಿ.ಸೋಮಣ್ಣ, ವಸತಿ ಸಚಿವ

ದಿನನಿತ್ಯದ ಕಾಯಕವಾಗಿ, ಚಳಿ, ಮಳೆ, ಗಾಳಿ ಎನ್ನದೆ ಮುಂಜಾನೆಯೇ ಮನೆ ಮನೆಗೆ ಪತ್ರಿಕೆ ತಲುಪಿಸುವ ಶ್ರಮಜೀವಿಗಳಾದ ದಿನಪತ್ರಿಕೆ ವಿತರಕರಿಗೆ ವಿಶ್ವ ಪತ್ರಿಕಾ ವಿತರಕರ ದಿನದ ಶುಭಾಶಯಗಳು. ವಿಶೇಷವಾಗಿ, ಈ ಕೊರೋನ ಸಂಕಷ್ಟದ ಸಮಯದಲ್ಲಿಯೂ ನಿಷ್ಟೇಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಪತ್ರಿಕಾ ವಿತರಕರಿಗೆ ಕೃತಜ್ಞತಾಪೂರ್ವಕ ಅಭಿನಂದನೆಗಳು'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಬಿಜೆಪಿ ಸರಕಾರವು ಬಿಬಿಎಂಪಿ ಚುನಾವಣೆ ಮುಂದೂಡಲು ವಾರ್ಡ್ ಗಳ ಸಂಖ್ಯೆಯನ್ನು 225ಕ್ಕೇರಿಸಲು ಮುಂದಾಗಿದೆ. ಕೊರೋನ ನಿರ್ವಹಣೆಯಲ್ಲಿ ವಿಫಲವಾಗಿರುವ ಬಿಜೆಪಿ ನಗರದ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈಗಾಗಲೇ ವಾರ್ಡ್ ಗಳನ್ನು ಮರುವಿಂಗಡನೆ ಮಾಡಿದರೂ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟ'

-ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News