ತಲಕಾವೇರಿ ದುರಂತಕ್ಕೆ ತ್ರಿಮೂರ್ತಿಗಳು ಕಾರಣ: ವಕೀಲ ಮಾಚಯ್ಯ ಆರೋಪ

Update: 2020-09-04 18:50 GMT

ಮಡಿಕೇರಿ, ಸೆ.4: ಕಾವೇರಿಯ ಕ್ಷೇತ್ರ ತಲಕಾವೇರಿಯಲ್ಲಿ ಸಂಭವಿಸಿದ ದುರ್ಘಟನೆಗಳಿಗೆ ಅರ್ಚಕರು, ಜಿಲ್ಲಾಡಳಿತ ಮತ್ತು ಅಷ್ಟಮಂಗಲ ಪ್ರಶ್ನೆ ಎನ್ನುವ ‘ತ್ರಿಮೂರ್ತಿ’ಗಳೇ ಕಾರಣವೆಂದು ವಕೀಲ ಬಿ.ಎ.ಮಾಚಯ್ಯ ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿಯ ತಪ್ಪಲಿನ ಕಾವೇರಿ ಮಾತೆಯಲ್ಲೆ ದೋಷ ಹುಡುಕುವ ‘ಅಷ್ಟಮಂಗಲ’ ಪ್ರಶ್ನೆಯಂತಹ ಕಾರ್ಯಕ್ರಮಗಳು ಅರ್ಥಹೀನವಾಗಿದ್ದು, ಇದು ಅಕ್ರಮ ಸಂಪಾದನೆಯ ಒಂದು ಹಾದಿಯಷ್ಟೇ ಎಂದು ಟೀಕಿಸಿದರು.

ಪವಿತ್ರವಾದ ಕಾವೇರಿ ಕ್ಷೇತ್ರದಲ್ಲೆ ಶುದ್ಧ, ಅಶುದ್ಧವೆನ್ನುವ ಮಾತನಾಡುತ್ತಾ, ಕಾವೇರಿ ಮಾತೆ ಕೊಡವ, ಅಮ್ಮ ಕೊಡವರಿಗೆ ಶಾಪ ಹಾಕಿದ್ದಾಳೆ ಎಂದು ಇದೇ ತ್ರಿಮೂರ್ತಿಗಳು ಹೇಳಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ಅಷ್ಟಮಂಗಲ ಪ್ರಶ್ನೆಯ ಮೂಲಕ ಹಣವ್ಯಯ ಮಾಡುತ್ತಿರುವುದಾಗಿ ಆರೋಪಿಸಿದ ಮಾಚಯ್ಯ, ಲೋಕಕಲ್ಯಾಣಕ್ಕಾಗಿ ತೀರ್ಥರೂಪಿಣಿಯಾಗಿ ಹರಿದ ಕಾವೇರಿ ಯಾರಿಗೂ ಶಾಪ ನೀಡುವವಳಲ್ಲ. ಆಕೆಯ ಬಗ್ಗೆ ದೋಷ ಹುಡುಕುವುದನ್ನು  ಮೊದಲು ನಿಲ್ಲಿಸಲಿ ಎಂದು ಒತ್ತಾಯಿಸಿದರು.

ಕ್ಷೇತ್ರದಲ್ಲಿ ನಡೆದಿರುವ ದುರ್ಘಟನೆಗಳಿಗೆ ಜಿಲ್ಲೆಯ ಸಾರ್ವಜನಿಕರಾರು ಕಾರಣರಲ್ಲ. ಕಾವೇರಿಯ ಕ್ಷೇತ್ರದಲ್ಲಿ ಮುನ್ನೂರು ವರ್ಷಗಳಿಂದ ಅರ್ಚಕರಾಗಿ ನಡೆದುಕೊಂಡು ಬಂದವರು, ಅಷ್ಟಮಂಗಲ ಪ್ರಶ್ನೆಗಳನ್ನು ನಡೆಸಿದವರು ಹಾಗೂ ಇದಕ್ಕೆ ಬೆಂಬಲವಾಗಿ ನಿಂತ ಜಿಲ್ಲಾಡಳಿತವೇ ಕಾರಣವೆಂದು ಮಾಚಯ್ಯ ಆರೋಪಿಸಿದರು. 

ಅಶ್ವತ್ಥ ಮರ ತೆಗೆದರು
ಕಾವೇರಿಯ ತೀರ್ಥ ಕುಂಡಿಕೆಯ ಬಳಿಯಲ್ಲೆ ಹಲ ದಶಕಗಳ ಹಿಂದೆ ಪುಟ್ಟದಾದ ಅಶ್ವತ್ಥ ಮರವೊಂದಿತ್ತು. ಆ ಹಂತದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿಗಳ ಸೂಚನೆಯಂತೆ, ಅವರನ್ನು ಸಂತೃಪ್ತಗೊಳಿಸುವ ಉದ್ದೇಶದಿಂದ ಆ ಮರವನ್ನು ಕಿತ್ತು ತೆಗೆದು ಕಟ್ಟೆಗಳನ್ನು ಕಟ್ಟುವ ಕೆಲಸ ಮಾಡಿರುವುದು ಮೊದಲ ಲೋಪವೆಂದು ಮಾಚಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಷ್ಟಮಂಗಲ ಪ್ರಶ್ನೆಯನ್ನಿರಿಸಿದಾಗ ಕಾವೇರಿಯ ಶಾಪ ಸ್ಥಳೀಯ ಕೊಡವರು, ಅಮ್ಮಕೊಡವರ ಮೇಲಿದೆ ಎಂದು ಹೇಳಿ ಅದರ ಪರಿಹಾರ ಕ್ರಮಗಳನ್ನು ಹೇಳಲಾಗಿತ್ತಾದರು, ಅದರ ನಿವಾರಣೆಯ ಕ್ರಮ ಇಲ್ಲಿಯವರೆಗೂ ಆಗಿಲ್ಲವೆಂದು ವ್ಯಂಗ್ಯವಾಗಿವಾಡಿದ ಅವರು, ಇದನ್ನು ಸರಿಪಡಿಸದಿರುವುದು ಈ ತ್ರಿಮೂರ್ತಿಗಳದ್ದೇ ತಪ್ಪಲ್ಲವೆ ಎಂದು ಪ್ರಶ್ನಿಸಿದರು. ಹಾನಿಯಾಗಿದೆ ಎನ್ನುವ ಕಾರಣಕ್ಕೆ ಅಗಸ್ತ್ಯೇಶ್ವರನ ಲಿಂಗವನ್ನು ಪುನರ್ ಪ್ರತಿಷ್ಟಾಪನೆ ಮಾಡದೆ, ಅದನ್ನು ವಿಸರ್ಜಿಸಲು ಮುಂದಾದ ಕ್ರಮಗಳು ತಪ್ಪೆಂದು ತಿಳಿಸಿದರು. 

ಆಸ್ತಿಯ ತನಿಖೆಯಾಗಲಿ
ತಲಕಾವೇರಿ ತಪ್ಪಲಿನಲ್ಲಿ ಅಪಾರವಾದ ಸ್ಥಿರಾಸ್ತಿಗಳಿದ್ದು, ಏಲಕ್ಕಿ ಕೃಷಿಗೆಂದು 500 ಏಕರೆಯಿಂದ 3 ಸಾವಿರ ಏಕರೆಯವರೆಗಿನ ಜಮ್ಮಾ ಮಲೆಗಳಿವೆ. 1980 ರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಾರಿಗೆ ಬಂದ ಉಳುವವನೇ ಭೂಮಿ ಎನ್ನುವ ಕಾನೂನಿನಡಿ, ಜಾಗ ಮಂಜೂರಾತಿಯ ಜಿಲ್ಲಾ ಸಮಿತಿಯಲ್ಲಿ ನಾನು ಒಬ್ಬ ಸದಸ್ಯನಾಗಿದ್ದೆನೆಂದು ಮಾಚಯ್ಯ ಮಾಹಿತಿ ನೀಡಿದರು.

ಈ ಸಂದರ್ಭ ತಲಕಾವೇರಿ ಕ್ಷೇತ್ರದ ಅರ್ಚಕ ಕುಟುಂಬದವರೊಬ್ಬರು ತಾವು ಏಲಕ್ಕಿ ಕೃಷಿ ನಡೆಸುತ್ತಿದ್ದು, ತಮಗೆ ಆ ಜಾಗವನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಸಂದರ್ಭ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ನಂತರದ ದಿನಗಳಲ್ಲಿ ಅವರು ಜಾಗವನ್ನು ಪಡೆದುಕೊಂಡು ದಾಖಲೆಗಳನ್ನು ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಮಾಚಯ್ಯ ಅವರು, ಅರ್ಚಕ ಕುಟುಂಬದ ಆಸ್ತಿಯ ಬಗ್ಗೆ ತನಿಖೆ ನಡೆಯಲಿ. ಈ ತನಿಖೆಯಿಂದ ಮುನ್ನೂರು ವರ್ಷಗಳ ಹಿಂದೆ ಬಂದ ಅರ್ಚಕರಿಗೆ ಇಷ್ಟು ದೊಡ್ಡ ಮೌಲ್ಯದ ಆಸ್ತಿ ಹೇಗೆ ಬಂದಿದೆ ಎನ್ನುವುದು ತಿಳಿಯುತ್ತದೆ ಎಂದು ಹೇಳಿದರು.

ಅಮ್ಮ ಕೊಡವರು ಪೂಜೆ ಮಾಡಲಿ
ತಲಕಾವೇರಿ ಕ್ಷೇತ್ರದಲ್ಲಿ ಇಂತಹವರೇ ಪೂಜೆ ಮಾಡಬೇಕೆಂದು ಎಲ್ಲಿಯೂ ನಿಗದಿಯಾಗಿಲ್ಲ. ಮನಶುದ್ಧಿ ಇರುವ ಯಾರು ಬೇಕಾದರೂ ಪೂಜೆಗೆ ಅರ್ಹರಾಗಿರುತ್ತಾರೆ. ಈ ಹಿನ್ನೆಲೆ ಅಮ್ಮಕೊಡವರ ಬೇಡಿಕೆಯಂತೆ ಕ್ಷೇತ್ರದ ಪೂಜಾ ಕಾರ್ಯದ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಡಬೇಕು ಎಂದು ಒತ್ತಾಯಿಸಿದರು. 

ಸ್ಥಳೀಯ ಕೊಡವ ಸಮುದಾಯದ ಸಂಸ್ಕೃತಿಯಲ್ಲಿ ದೇವರ ಪೂಜೆಗೆ ಅರ್ಚಕರ ಬಳಕೆ ಇಲ್ಲ. ಅದರಂತೆ ಅಮ್ಮ ಕೊಡವರನ್ನು ಕ್ಷೇತ್ರಕ್ಕೆ ಅರ್ಚಕರನ್ನಾಗಿ ನೇಮಿಸುವುದು ಅಗತ್ಯವಾಗಿದ್ದು, ನಮಗು ಮತ್ತು ದೇವರ ನಡುವೆ ಮಧ್ಯವರ್ತಿಗಳ ಅವಶ್ಯಕತೆ ಇಲ್ಲವೆಂದು ಮಾಚಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿವೇಕ್ ಗಣಪತಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News