ಶಿಕ್ಷಕರ ಸಮಸ್ಯೆಗಳ ನಿವಾರಿಸಲು ಡಿ.ಕೆ.ಶಿವಕುಮಾರ್ ಒತ್ತಾಯ

Update: 2020-09-05 17:15 GMT

ಬೆಂಗಳೂರು, ಸೆ.5: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಸರಕಾರ ರಾಜ್ಯದ ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಶಿಕ್ಷಕರ ಸಮಸ್ಯೆಗಳ ಹಾಗೂ ಸರಕಾರ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ವಿತರಣೆ ನೀಡಿದ್ದು, ಕೂಡಲೇ ಸರಕಾರ ಎಚ್ಚೆತ್ತುಕೊಂಡು ಅಧ್ಯಾಪಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಸರಕಾರದ ನಿರ್ಲಕ್ಷ್ಯದಿಂದಾಗಿ ಖಾಸಗಿ ಶಾಲೆಗಳ 40 ಸಾವಿರಕ್ಕೂ ಅಧಿಕ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. 2 ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ಸಂಬಳವಿಲ್ಲದೆ ಒದ್ದಾಡುತ್ತಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವವರು ತಳ್ಳುಗಾಡಿ ವ್ಯಾಪಾರ, ಗಾರೆ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರವನ್ನು ಸರಿ ದಾರಿಗೆ ತರಲು ಸರಕಾರ ಯಾವ ಯೋಜನೆ ಹಾಕಿಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ 80 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ. 62.5ರಷ್ಟು ಮಕ್ಕಳಿಗೆ ಮಾತ್ರ ಸ್ಮಾರ್ಟ್ ಫೋನ್, ಲ್ಯಾಪ್‍ಟಾಪ್ ಲಭ್ಯತೆ ಇದೆ. ಶೇ. 53.75 ಮಕ್ಕಳಿಗೆ ಮಾತ್ರ ಇಂಟರ್‍ನೆಟ್ ಸಂಪರ್ಕ ಲಭ್ಯವಿದೆ. ಈ ಎಲ್ಲಾ ತಂತ್ರಜ್ಞಾನದ ಲಭ್ಯತೆ ಇಲ್ಲದ ಮಕ್ಕಳು ಆನ್‍ಲೈನ್ ಶಿಕ್ಷಣ ಪಡೆಯುವುದಾದರು ಹೇಗೆ ಎಂದು ಕೇಳಿದ್ದಾರೆ.

ಸರಕಾರ ತಕ್ಷಣವೇ ನಿದ್ರಾಲೋಕದಿಂದ ಮೇಲೆದ್ದು ಹಳಿ ತಪ್ಪಿರುವ ಶಿಕ್ಷಣ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ಹಾಗೂ ಶಿಕ್ಷಕರಿಗೆ ನೆರವಾಗಲು ಕಾಂಗ್ರೆಸ್‍ನ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇನೆ ಎಂದು ಹತ್ತು ಅಂಶಗಳ ಪಟ್ಟಿಯನ್ನೂ ಡಿಕೆಶಿ ಬಿಡುಗಡೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News