ಕೋವಿಡ್ ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗಳ ಕರಾಮತ್ತು

Update: 2020-09-05 19:30 GMT

ಖಾಸಗಿ ಆಸ್ಪತ್ರೆಗಳು ಹಣದ ದುರಾಸೆಗೆ ಬಿದ್ದು ರೋಗಿಗಳಿಂದ ಹೆಚ್ಚುವರಿಯಾಗಿ ಹಣ ವಸೂಲು ಮಾಡುತ್ತಿರುವುದು ಸರಿಯಲ್ಲ.ಇಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವುದು ಖಂಡಿತಾ ಒಳ್ಳೆಯದಲ್ಲ. ವೈದ್ಯಕೀಯ ಸೇವೆ ಆರಂಭಿಸುವಾಗ ಸ್ವೀಕರಿಸಲಾದ ಹಿಪೋಕ್ರೇಟ್ ಪ್ರಮಾಣ ವಚನವನ್ನು ಮರೆಯಬಾರದಲ್ಲವೇ?


ಕೊೀವಿಡ್-19 ಸಾಂಕ್ರಾಮಿಕ ರೋಗ ಕೇವಲ ನಮ್ಮ ದೇಶವನ್ನಷ್ಟೇ ಅಲ್ಲದೆ ಇಡೀ ಜಗತ್ತಿನ ಬಹುತೇಕ ದೇಶಗಳ ಜನ-ಜೀವನವನ್ನು ತಲ್ಲಣಗೊಳಿಸಿದೆ. ಅಸಂಖ್ಯಾತ ಜನರನ್ನು ಇನ್ನೂ ಬಾಧಿಸುತ್ತಲೇ ಇದೆ. ಈ ಆಘಾತಕಾರಿ ಸಾಂಕ್ರಾಮಿಕ ರೋಗವು ಉಲ್ಬಣವಾಗದಂತೆ ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ಇದನ್ನು ಒಂದು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಈ ಸಾಂಕ್ರಾಮಿಕ ರೋಗವನ್ನು ತಡೆಯಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿವೆ. ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಲಾಕ್‌ಡೌನ್, ಸೀಲ್‌ಡೌನ್, ಹೆಚ್ಚಿನ ಸಂಖ್ಯೆಯ ಟೆಸ್ಟ್‌ಗಳು, ರೋಗಿಗಳಿಗೆ ಚಿಕಿತ್ಸಾ ಸೌಲಭ್ಯಗಳು ಮುಂತಾದ ಹಲವು ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದಾಗ್ಯೂ ಕೋವಿಡ್ ಸಾಂಕ್ರಾಮಿಕ ರೋಗ ಜನರಿಂದ ಜನರಿಗೆ ಹರಡುತ್ತಲೇ ಸಾಗಿದೆ.

ಒಂದೆಡೆ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸುವುದು, ಇನ್ನೊಂದಡೆ ಈ ಸಾಂಕ್ರಾಮಿಕ ರೋಗ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ಜಾಗ್ರತೆ ವಹಿಸುವುದು, ಇದರ ನಡುವೆ ಸಾಮಾನ್ಯ ಜನ-ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದೂ ಸಹ ಸರಕಾರಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಆದರೂ ರಾಜ್ಯ ಸರಕಾರ ಸಕಾಲದಲ್ಲಿ ಸೂಕ್ತ ಕ್ರಮಗಳನ್ನು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸ್ಥಿತಿ ಕೈಮೀರದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ. ಕರ್ನಾಟಕದಲ್ಲಿ ಈ ಸಾಂಕ್ರಾಮಿಕ ರೋಗದ ಆರಂಭದ ಹಂತದಲ್ಲಿ ಎಲ್ಲ ಕೋವಿಡ್ ರೋಗಿಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ದಿನಗಳೆದಂತೆ ಸಾಂಕ್ರಾಮಿಕ ರೋಗ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಾ ಸಾಗಿದ್ದರಿಂದ ಹಾಗೂ ರೋಗಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿದ್ದರಿಂದ ರಾಜ್ಯ ಸರಕಾರವು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವಕ್ಕೆ ಮುಂದಾಯಿತು.ಅಷ್ಟೇ ಅಲ್ಲದೆ ಸರಕಾರದ ಕೋಟಾದಡಿಯಲ್ಲಿ ಬೆಡ್ ಹಂಚಿಕೆ ಮಾಡಲಾದ ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಿದರೆ ಆ ಚಿಕಿತ್ಸೆಯ ವೆಚ್ಚ ಪಾವತಿಗಾಗಿ ಉತ್ತಮ ಪ್ಯಾಕೇಜ್‌ನ್ನು ಕೂಡಾ ಘೋಷಿಸಿದೆ.

ಜೊತೆಗೆ ಯಾವುದೇ ರೋಗಿಗಳು ಸ್ವ-ಇಚ್ಛೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ನಗದು ಆಧಾರಿತ ಚಿಕಿತ್ಸೆ ಪಡೆದು ಕೊಂಡರೆ ಅದಕ್ಕೂ ಸಹ ಸರಕಾರವು ದರಗಳನ್ನು ನಿಗದಿಪಡಿಸುವ ಮೂಲಕ ರೋಗಿಗಳ ಹಿತಕಾಯಲು ಮುಂದಾಯಿತು. ರಾಜ್ಯ ಸರಕಾರವು ಕೋವಿಡ್ ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ಸಹಕಾರವನ್ನು ಕೋರಿದರೂ ಆರಂಭದಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬರಲಿಲ್ಲ. ಖಾಸಗಿ ಆಸ್ಪತ್ರೆಗಳ ಮನವೊಲಿಸಲು ಖುದ್ದು ಮುಖ್ಯಮಂತ್ರಿಗಳು, ಇಲಾಖಾ ಸಚಿವರುಗಳು, ಅಧಿಕಾರಿಗಳು ಸೇರಿದಂತೆ ಹಲವು ಸುತ್ತಿನ ಸಭೆಗಳನ್ನು ನಡೆಸಿದರು. ಕೊನೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ -2005ರ ಅನ್ವಯ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಡ್ಡಾಯಗೊಳಿಸಲಾಯಿತು. ಇಂತಹ ಸತತ ಪ್ರಯತ್ನಗಳ ಫಲವಾಗಿ ಈಗ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಆದರೆ ರೋಗಿಗಳಿಗೆ ಹೊರೆಯಾಗದಂತೆ ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಅನುಕೂಲವಾಗುವಂತೆ ಸರಕಾರವು ಉತ್ತಮ ರೀತಿಯ ಚಿಕಿತ್ಸಾ ದರಗಳ ಪ್ಯಾಕೇಜ್‌ನ್ನು ಘೋಷಿಸಿದೆ. ಆದಾಗ್ಯೂ ಹಲವು ಖಾಸಗಿ ಆಸ್ಪತ್ರೆಗಳು ದುರಾಸೆಗೆ ಬಿದ್ದು ಬಡ ರೋಗಿಗಳಿಂದ ಹಣ ಪಡೆಯುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಸರಕಾರದ ಕೋಟಾದ ಅಡಿಯಲ್ಲಿ ಚಿಕಿತ್ಸೆ ನೀಡುವ ರೋಗಿಗಳಿಗೆ ಸರಕಾರದಿಂದ ನೀಡಲಾಗುವ ಕೋವಿಡ್ ಪ್ಯಾಕೇಜ್ ಹಣವನ್ನೂ ಪಡೆಯುತ್ತಿವೆ. ಜೊತೆಗೆ ಸರಕಾರಕ್ಕೆ ಗೊತ್ತಾಗದಂತೆ ರೋಗಿಗಳಿಂದ ಬೇರೆ ಬೇರೆ ಸೇವೆಗಳ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿವೆ. ಇದರಿಂದ ಕೋವಿಡ್ ರೋಗಿಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇದು ನಿಜಕ್ಕೂ ಅಮಾನವೀಯ ಸಂಗತಿಯಾಗಿದೆ.

ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೋವಿಡ್ ಚಿಕಿತ್ಸೆಗಾಗಿ ಸರಕಾರದ ಕೋಟಾದಲ್ಲಿ ದಾಖಲಾಗಿದ್ದ ಶ್ರೀಮತಿ ಲೇಖಾ ಅವರಿಂದ ರೂ. 65,000ಗಳನ್ನು ಹೆಚ್ಚುವರಿಯಾಗಿ ವಸೂಲು ಮಾಡಿರುವುದಾಗಿ ಸ್ವತಃ ರೋಗಿಯೇ ಹೇಳಿರುತ್ತಾರೆ. ಇನ್ನೊಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಜಯ್ ಕುಮಾರ್ ಅವರಿಂದಲೂ ರೂ.25,000ಗಳನ್ನು ಆಸ್ಪತ್ರೆಯವರು ಹೆಚ್ಚುವರಿಯಾಗಿ ವಸೂಲು ಮಾಡಿರುವುದಾಗಿ ರೋಗಿ ತಿಳಿಸಿರುತ್ತಾರೆ. ನಗರದ ಬೇರೆ ಬೇರೆಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಶಿವರಾಮ್ ಎಂಬ ರೋಗಿಯಿಂದ ರೂ. 35,000, ಶ್ರೀಮತಿ ಅನಿತಾ ಅವರಿಂದ ರೂ. 60,000, ಮುಹಮ್ಮದ್ ಪಾಷಾ ಅವರಿಂದ 14,000, ಕೆ. ಸುರೇಶ್‌ಕುಮಾರ್ ಆವರಿಂದ ರೂ.80,000, ಶ್ರೀಮತಿ ಕವಿತಾ ಅವರಿಂದ ರೂ. 85,000 ಹೀಗೆ ಹಲವಾರು ಖಾಸಗಿ ಆಸ್ಪತ್ರೆಗಳು ಅನೇಕ ರೋಗಿಗಳಿಂದ ಹೆಚ್ಚುವರಿಯಾಗಿ ಹಣ ವಸೂಲು ಮಾಡಿರುವುದಾಗಿ ತಿಳಿಸಿರುತ್ತಾರೆ.

ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೋವಿಡ್ ರೋಗಿಗಳಿಗೆ ಸರಕಾರವು ಪ್ರತ್ಯೇಕವಾಗಿ ಚಿಕಿತ್ಸಾ ದರಗಳನ್ನು ನಿಗದಿ ಮಾಡಿದ್ದರೂ ಹಲವು ಆಸ್ಪತ್ರೆಗಳು ಸರಕಾರ ನಿಗದಿ ಮಾಡಿರುವ ದರಗಳಿಗಿಂತ ಹೆಚ್ಚುವರಿಯಾಗಿ ಲಕ್ಷಾಂತರ ರೂಪಾಯಿಗಳನ್ನು ವಸೂಲು ಮಾಡಿರುವುದಾಗಿ ಅನೇಕ ರೋಗಿಗಳು ತಿಳಿಸಿರುತ್ತಾರೆ. ಕೋವಿಡ್ ರೋಗಿಗಳ ಚಿಕಿತ್ಸೆಗೆ ಸರಕಾರ ಉತ್ತಮ ರೀತಿಯ ಪ್ಯಾಕೇಜ್ ನೀಡಿದ್ದರೂ ಖಾಸಗಿ ಆಸ್ಪತ್ರೆಗಳು ಹಣದ ದುರಾಸೆಗೆ ಬಿದ್ದು ರೋಗಿಗಳಿಂದ ಹೆಚ್ಚುವರಿಯಾಗಿ ಹಣ ವಸೂಲು ಮಾಡುತ್ತಿರುವುದು ಸರಿಯಲ್ಲ.ಇಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವುದು ಖಂಡಿತಾ ಒಳ್ಳೆಯದಲ್ಲ. ವೈದ್ಯಕೀಯ ಸೇವೆ ಆರಂಭಿಸುವಾಗ ಸ್ವೀಕರಿಸಲಾದ ಹಿಪೋಕ್ರೇಟ್ ಪ್ರಮಾಣ ವಚನವನ್ನು ಮರೆಯಬಾರದಲ್ಲವೇ? ಇನ್ನು ಮುಂದಾದರೂ ಖಾಸಗಿ ಆಸ್ಪತ್ರೆಗಳು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಬಡ ರೋಗಿಗಳಿಂದ ಹೆಚ್ಚುವರಿ ಹಣಪಡೆಯುವುದನ್ನು ನಿಲ್ಲಿಸಬೇಕು ಹಾಗೂ ಸರಕಾರದೊಂದಿಗೆ ಪೂರಕವಾಗಿ ಸಹಕರಿಸುವುದು ನ್ಯಾಯೋಚಿತವಾಗಿದೆ.

Writer - ಪ್ರವೀಣ್ ಹುಲಿಕುಂಟೆ

contributor

Editor - ಪ್ರವೀಣ್ ಹುಲಿಕುಂಟೆ

contributor

Similar News