ಹೊಸ ಶಿಕ್ಷಣ ನೀತಿಯಿಂದಾಗಿ ಹೊಸ ಆಲೋಚನೆಗಳ ಯುವಪೀಳಿಗೆ ಸೃಷ್ಟಿ ಸಾಧ್ಯ: ಸಚಿವ ಸಿ.ಟಿ.ರವಿ

Update: 2020-09-05 17:52 GMT

ಚಿಕ್ಕಮಗಳೂರು, ಸೆ.5: ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ನೂತನ ಶಿಕ್ಷಣ ನೀತಿಯಿಂದಾಗಿ ಮುಂದಿನ 20 ವರ್ಷಗಳಲ್ಲಿ ಹೊಸ ಆಲೋಚನೆಗಳ ಹೊಸ ಯುವ ಪೀಳಿಗೆ ಸೃಷ್ಟಿಯಾಗಲಿದೆ. ಹೊಸ ಶಿಕ್ಷಣ ನೀತಿಯಿಂದಾಗಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಮಾತೃಭಾಷಾ ಪ್ರೇಮ ಬೆಳೆಯುವುದಲ್ಲದೇ ಉದ್ಯೋಗ ಕೌಶಲ್ಯದೊಂದಿಗೆ ವಿದ್ಯಾರ್ಥಿಯನ್ನು ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಲಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಸಚಿವ ಸಿ.ಟಿ.ರವಿ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 59ನೆಯ ಜನ್ಮದಿನದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಗುರುವಿಗೆ ಅತ್ಯಂತ ಉನ್ನತ ಸ್ಥಾನ ನೀಡಲಾಗಿದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಪಠ್ಯವನ್ನು ವಿದ್ಯಾರ್ಥಿಗಳಿಗೆ ಪುಸ್ತಕದಿಂದ ಮಸ್ತಕಕ್ಕೆ ತುಂಬುವುದಾಗಿದೆ. ಅರಿವು, ವಿದ್ಯಾರ್ಥಿಯ ಸಮಗ್ರ ವಿಕಾಸದ ಶಿಕ್ಷಣ ದೂರ ಸರಿದು ಬಹಳ ಕಾಲವಾಗಿದೆ. ಹೊಸ ಶಿಕ್ಷಣ ನೀತಿಯಿಂದಾಗಿ ಇದು ಮತ್ತೆ ಹತ್ತಿರವಾಗಲಿದೆ ಎಂದರು.

ಯಾವ ದೇಶದಲ್ಲಿ ಶಿಕ್ಷಣದಿಂದ ಬದಲಾವಣೆ ತರಲು ಸಾಧ್ಯವಿಲ್ಲವೋ ಆ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ನಮ್ಮಲ್ಲಿ ಸ್ವಂತಿಕೆ ಬಂದಿಲ್ಲ. ಶಿಕ್ಷಣ ಸ್ವಂತಿಕೆ ಮೂಡಿಸಬೇಕು. ಪದವಿ ಪ್ರಮಾಣ ಪತ್ರಗಳಿಂದ ಉದ್ಯೋಗ ಸೃಷ್ಟಿಯಾಗುವುದಿಲ್ಲ, ಎಷ್ಟೋ ಜನರು ಮಾಡುತ್ತಿರುವ ಕೆಲಸಕ್ಕೂ ಅವರ ಪದವಿಗೂ ಸಂಬಂಧವೇ ಇಲ್ಲ, ವ್ಯಕ್ತಿಯ ಸ್ವಾಲಂಬನೆಯಿಂದ ಉದ್ಯೋಗ ಸೃಷ್ಟಿ ಮತ್ತು ದೇಶಕಟ್ಟಲು ಸಾಧ್ಯ ಎಂದರು.

ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಹೊಸ ಶಿಕ್ಷಣ ನೀತಿಯಿಂದ ಮುಂದಿನ 20ವರ್ಷಗಳ ನಂತರ ದೇಶದಲ್ಲಿ ಹೊಸ ಆಲೋಚನೆ ಸೃಷ್ಟಿಯಾಗಲಿದೆ. ಮಾತೃಭಾಷೆಯಿಂದ ಮಾತ್ರ ಮನಸ್ಸಿನ ಭಾವನೆ ವ್ಯಕ್ತಪಡಿಸಲು ಸಾಧ್ಯ. ಅದರಂತೆ ನೂತನ ಶಿಕ್ಷಣ ನೀತಿಯಲ್ಲಿ 5ವರ್ಷಗಳ ಕಾಲ ಆಯಾ ವಿದ್ಯಾರ್ಥಿಯ ಮಾತ್ರಭಾಷೆಯಲ್ಲೇ ಕಲಿಯಬೇಕು ಎಂದು ಈ ಶಿಕ್ಷಣ ನೀತಿ ಹೇಳಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ 6ನೇ ತರಗತಿಯಿಂದಲೇ ಕೌಶಲ್ಯ ತರಬೇತಿ ಬೆಳೆಸಲಿದೆ. ಇದರಿಂದ ವಿದ್ಯಾರ್ಥಿ ತನ್ನ ಆಸಕ್ತಿಯ ವಿಷಯದಲ್ಲಿ ತರಬೇತಿ ಪಡೆದು ಸ್ವಾಲಂಭಿಯಾಗುವುದರೊಂದಿಗೆ ಪೂರಿಪೂರ್ಣವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.

ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಮಾತನಾಡಿ, ಆರೋಗ್ಯಕರವಾದ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು. ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ನಡುವಿನ ಪೈಪೋಟಿಯಿಂದ ಇಂದು ಅನೇಕ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಬಂದಿದೆ. ಶಿಕ್ಷಕರು ಸೇರಿದಂತೆ ಯಾವುದೇ ಪ್ರಶಸ್ತಿಗಳಿಗೆ ಜನಪ್ರತಿನಿಧಿಗಳು ಶಿಫಾರಸು ಮಾಡಬಾದರು. ಶಿಫಾರಸು ಮಾಡಿದರೇ ಪ್ರಾಮಾಣಿಕ, ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಅನ್ಯಾಯವಾಗುತ್ತದೆ. ಎಂತಹ ಕ್ರೂರಿಯನ್ನು ಸದ್ಗುಣ ವಂತರನ್ನಾಗಿಸುವ ಶಕ್ತಿ ಶಿಕ್ಷಕರಿಗೆ ಇದೆ ಎಂದು ಬಣ್ಣಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ವಿಶ್ವಸಂಸ್ಥೆಯೂ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದೆ. ಕಲಿಸಿದ ಗುರುವನ್ನು ಎಂದಿಗೂ ಮೆರೆಯಬಾರದು, ಗುರುವನ್ನು ಮೀರಿಸಿದ ಶಿಷ್ಯನಾಗಿ ಬೆಳೆದಾಗ ಮಾತ್ರ ಆ ಗುರುವಿಗೆ ಸಲ್ಲಿಸುವ ನಿಜವಾದ ಗುರುದಕ್ಷಿಣೆಯಾಗಿದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿದೆ ಆದರೆ, ಜೀವನ ಪಾಠ ಕಲಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ಶಿಕ್ಷಣದಿಂದ ಜೀವನ ಮಟ್ಟದಲ್ಲಿ ಉತ್ತಮವಾಗದಿದ್ದರೇ, ಮುಂದಿನ ತಲೆಮಾರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿಲ್ಲಾಪಂಚಾಯತ್ ಉಪಾಧ್ಯಕ್ಷ ಸೋಮಶೇಖರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಶಿಕಲಾ ಅವಿನಾಶ್ ಮಾತನಾಡಿದರು. ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ 24 ಶಿಕ್ಷಕರನ್ನು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ್ ಸದಸ್ಯರಾದ ಬೆಳವಾಡಿ ರವೀಂದ್ರ, ಕವಿತಾಲಿಂಗರಾಜು, ಜಸಂತ ಅನಿಲ್‍ಕುಮಾರ್, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಶುಭಾಸತ್ಯಮೂರ್ತಿ, ಉಪಾಧ್ಯಕ್ಷೆ ಶಾರದಾ, ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾಅನಿಲ್, ಸದಸ್ಯರಾದ ದಾಕ್ಷಯಿಣಿ, ದೀಪಾನಾಗೇಶ್, ಭವ್ಯನಟೇಶ್, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ, ಡಯಟ್ ಪ್ರಿನ್ಸಿಪಾಲ್ ಪುಷ್ಪಲತಾ ಉಪಸ್ಥಿತರಿದ್ದರು. ಕ್ಷೇತ್ರಶಿಕ್ಷಣಾಧಿಕಾರಿ ಮಂಜುನಾಥ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News