ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟಿ ಮೇಘನಾ ರಾಜ್ ದೂರು: ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಇಂದ್ರಜಿತ್ ಲಂಕೇಶ್

Update: 2020-09-05 18:48 GMT

ಬೆಂಗಳೂರು, ಸೆ.5: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟಿ ಮೇಘನಾ ರಾಜ್ ದೂರು ನೀಡಿದ ಬೆನ್ನಲ್ಲೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಚಂದನವನದಲ್ಲಿ ಡ್ರಗ್ಸ್ ದಂಧೆ ಕುರಿತು ಇಂದ್ರಜಿತ್ ಲಂಕೇಶ್ ಮಾತನಾಡುವ ವೇಳೆ ಚಿರಂಜೀವಿ ಸರ್ಜಾ ಮೃತದೇಹವನ್ನ ಯಾಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಿಲ್ಲ ಎಂಬ ಅವರ ಹೇಳಿಕೆಯಿಂದ ನೋವಾಗಿದ್ದು, ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ನಟಿ ಮೇಘನಾ ರಾಜ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು.

ಶನಿವಾರ ಈ ಕುರಿತು ಫಿಲಂ ಚೇಂಬರ್ ಸುದ್ದಿಗೋಷ್ಠಿ ನಡೆಸಿದ್ದು, ಚೇಂಬರ್‍ನ ಗೌರವ ಕಾರ್ಯದರ್ಶಿ ಎನ್.ಎಂ. ಸುರೇಶ್ ಅವರು ಮೇಘನಾ ರಾಜ್ ಬರೆದ ಪತ್ರದ ಬಗ್ಗೆ ಪ್ರಸ್ತಾಪ ಮಾಡಿ, ಬರೆದ ಪತ್ರವನ್ನು ಸಭೆಯಲ್ಲಿ ಓದಿದ್ದಾರೆ. 

ಪತ್ರದಲ್ಲಿ ಇಂದ್ರಜಿತ್ ಲಂಕೇಶ್ ಅವರ ಮಾತುಗಳ ನನಗೆ ಮಾನಸಿಕ ತೊಳಲಾಟಕ್ಕೆ ತಳ್ಳಿವೆ. ಗರ್ಭಿಣಿ ಆಗಿರುವ ನಾನು ಮಾನಸಿಕ ತೊಳಲಾಟದಲ್ಲಿದ್ದೇನೆ. ನನ್ನ ದಿವಂಗತ ಪತಿ ಮೇಲೆ ಇಂದ್ರಜಿತ್ ಆರೋಪ ಮಾಡಿದ್ದಾರೆ. ಇಂದ್ರಜಿತ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಲಿ ಎಂದು ಪತ್ರದ ಮೂಲಕ ಒತ್ತಾಯಿಸಿದ್ದರು.

ಈ ಹಿನ್ನೆಲೆ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. ಅಲ್ಲದೇ ಮೇಘನಾ ರಾಜ್ ಅವರ ಮನೆಗೆ ಹೋಗಿ ಅವರನ್ನ ಭೇಟಿಯಾಗಿ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News