ಕೋವಿಡ್ ರೋಗಿಗಳಿಗೆ ಈಗ ಡೆಂಗಿ, ಮಲೇರಿಯಾ ಭೀತಿ

Update: 2020-09-06 03:09 GMT

ಹೊಸದಿಲ್ಲಿ, ಸೆ.6: ಕೋವಿಡ್-19 ಸೋಂಕಿನ ಜತೆಗೆ ಡೆಂಗಿ ಅಥವಾ ಮಲೇರಿಯಾ ಸೋಂಕು ತಗಲಿರುವ ರೋಗಿಗಳನ್ನು ದಿಲ್ಲಿಯ ಎರಡು ಪ್ರಮುಖ ಆಸ್ಪತ್ರೆಗಳ ವೈದ್ಯರು ಪತ್ತೆ ಮಾಡಿದ್ದಾರೆ. ಈ ಪ್ರವೃತ್ತಿ ಆತಂಕಕಾರಿಯಾಗಿದ್ದು, ಕೋವಿಡ್-19 ಸೋಂಕಿನ ಜತೆಗೆ ಈ ಎರಡು ರೋಗಗಳು ಹರಡಿದರೆ ರೋಗಿಯ ಪಾಲಿಗೆ ಮಾರಕವಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಇದೀಗ ಸೊಳ್ಳೆಗಳಿಂದ ಹರಡುವ ರೋಗದ ಸೀಸನ್ ಆರಂಭವಾಗುತ್ತಿದ್ದು, ಇದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ಕೋವಿಡ್-19 ಸೋಂಕಿನ ಜತೆಗೆ ಮಲೇರಿಯಾ, ಡೆಂಗಿ ಹಾಗೂ ಲೆಪ್ಟೋಸ್ಪಿರೋಸಿಸ್‌ನಂಥ ರೋಗಗಳು ಹಲವು ಮಂದಿಯಲ್ಲಿ ಕಂಡುಬಂದಿದ್ದು, ಈ ಎಲ್ಲ ರೋಗಗಳ ಲಕ್ಷಣ ಕೋವಿಡ್-19 ರೋಗಲಕ್ಷಣವನ್ನೇ ಹೋಲುತ್ತವೆ ಎಂದು ವೈದ್ಯಕೀಯ ಅಧ್ಯಯನ ವರದಿ ಹೇಳಿದೆ.

ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯಲ್ಲಿ ಇತ್ತೀಚೆಗೆ 30 ವರ್ಷದ ವ್ಯಕ್ತಿಯೊಬ್ಬನಲ್ಲಿ ಮಲೇರಿಯಾ, ಡೆಂಗಿ ಹಾಗೂ ಕೋವಿಡ್-19 ಸೋಂಕು ಕಂಡುಬಂದಿದೆ. ಆತ ಮೃತಪಟ್ಟಿದ್ದಾನೆ. "ಸೊಳ್ಳೆಗಳ ಸಂತಾನೋತ್ಪತ್ತಿ ಪ್ರದೇಶಗಳಲ್ಲಿ ಡೆಂಗಿ ಹಾಗೂ ಮಲೇರಿಯಾ ಜತೆಜತೆಗೆ ಕಾಣಿಸಿಕೊಳ್ಳುತ್ತಿದೆ. ಆದಾಗ್ಯೂ ಈಗ ಇರುವ ಶಿಷ್ಟಾಚಾರದ ಪ್ರಕಾರ, ಆತನನ್ನು ಕೋವಿಡ್-19 ಪರೀಕ್ಷೆಗೆ ಗುರಿಪಡಿಸಿದಾಗ ಪಾಸಿಟಿವ್ ಫಲಿತಾಂಶ ಬಂದಿದೆ. ಇದು ಹಲವು ಆರೋಗ್ಯ ಸಂಕೀರ್ಣತೆಗಳಿಗೆ ಕಾರಣವಾಗಿ ರೋಗಿ ಮೃತಪಟ್ಟಿದ್ದಾನೆ" ಎಂದು ಹಿರಿಯ ವೈದ್ಯ ಡಾ.ರಾಜೇಶ್ ಚಾವ್ಲಾ ವಿವರಿಸಿದ್ದಾರೆ.

ಲೋಕನಾಯಕ ಆಸ್ಪತ್ರೆಯಲ್ಲೂ ಇಂಥದ್ದೇ ಪ್ರಕರಣ ಪತ್ತೆಯಾಗಿದ್ದು, 14 ವರ್ಷ ವಯಸ್ಸಿನ ಕೋವಿಡ್-19 ರೋಗಿಯಲ್ಲಿ ರಕ್ತದ ಪ್ಲೇಟ್‌ಲೆಟ್ ಸಂಖ್ಯೆ ಕುಸಿದದ್ದನ್ನು ವೈದ್ಯರು ಪತ್ತೆ ಮಾಡಿದ್ದಾರೆ. "ಬಾಲಕನಿಗೆ ಡೆಂಗಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಫಲಿತಾಂಶ ಬಂದಿದೆ. ಆದ್ದರಿಂದ ಕೋವಿಡ್ ಜತೆಗೆ ಡೆಂಗಿ ರೋಗವನ್ನೂ ನಿಭಾಯಿಸಬೇಕಾಯಿತು. ಆದರೆ ಆತ ತೀವ್ರ ಅಸ್ವಸ್ಥನಾಗಿರಲಿಲ್ಲ. ಆದ್ದರಿಂದ 10 ದಿನಗಳ ಹಿಂದೆ ಬಿಡುಗಡೆ ಮಾಡಲಾಯಿತು" ಎಂದು ವೈದ್ಯಕೀಯ ನಿರ್ದೇಶಕ ಡಾ.ಸುರೇಶ್ ಕುಮಾರ್ ಹೇಳಿದ್ದಾರೆ.

ಸಾಮಾನ್ಯವಾಗಿ ಜುಲೈನಿಂದ ಆರಂಭವಾಗಿ ಅಕ್ಟೋಬರ್ ವರೆಗೆ ಇಲ್ಲಿ ಅಧಿಕ ಡೆಂಗಿ ಪ್ರಕರಣಗಳು ವರದಿಯಾಗುತ್ತವೆ. 2015ರಲ್ಲಿ 15,867 ಪ್ರಕರಣಗಳು ದಾಖಲಾಗಿದ್ದು, 60 ಮಂದಿ ಡೆಂಗಿ ಜ್ವರದಿಂದ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News