ಶಾಲೆಗಳಿಗೆ ದೇಣಿಗೆ ನೀಡುವವರಿಗಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿ

Update: 2020-09-07 17:12 GMT

ಬೆಂಗಳೂರು, ಸೆ.7: ಸರಕಾರಿ ಶಾಲೆಗಳಿಗೆ ದೇಣಿಗೆ ನೀಡುವ ಹಣದ ನಿರ್ವಹಣೆ ಸಂಬಂಧ ಶಿಕ್ಷಣ ಇಲಾಖೆ ಹಲವು ಷರತ್ತುಗಳನ್ನು ವಿಧಿಸಿದ್ದು, ಅದಕ್ಕಾಗಿ ನಮ್ಮ ಶಾಲೆ, ನನ್ನ ಕೊಡುಗೆ ಎಂಬ ಮೊಬೈಲ್ ಆ್ಯಪ್ ಅನ್ನು ರೂಪಿಸಲಾಗುತ್ತಿದೆ.

ಈ ಆ್ಯಪ್ ಶೀಘ್ರದಲ್ಲಿಯೇ ಸಿದ್ಧವಾಗಲಿದ್ದು, ದಾನಿಗಳು ನೆರವು ನೀಡುವ ವೇಳೆ ಈ ಆ್ಯಪ್ ಮೂಲಕವೇ ಮಾಡಬಹುದಾಗಿದೆ. ಆ್ಯಪ್ ಅಭಿವೃದ್ಧಿ ಹಾಗೂ ಅನುಷ್ಠಾನಕ್ಕಾಗಿ ರಾಜ್ಯ ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಿಂದ 1.46 ಕೋಟಿ ರೂ. ವಿನಿಯೋಗಿಸಲು ಶಿಕ್ಷಣ ಇಲಾಖೆ ಸಿದ್ಧವಾಗಿದೆ.

ರಾಜ್ಯದಲ್ಲಿ ಪ್ರತಿವರ್ಷ ಅತಿ ಹಿಂದುಳಿದ ಶಾಲೆಗಳನ್ನು ಹಲವರು ದತ್ತಿ ಪಡೆದು ಅಥವಾ ದಾನ ನೀಡುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಸ್ಪಂದಿಸುತ್ತಿದ್ದಾರೆ. ಆದರೆ, ಅದಕ್ಕೆ ಸರಿಯಾದ ಉತ್ತರದಾಯಿತ್ವ ಇರಲಿಲ್ಲ. ಇದನ್ನು ಮನಗಂಡ ಸರಕಾರ ದಾನಿಗಳು ನೀಡುವ ದೇಣಿಗೆಯ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳುಲು ಈ ಆ್ಯಪ್ ರೂಪಿಸುತ್ತಿದೆ.

ಜಂಟಿ ಖಾತೆ ತೆರೆಯಬೇಕು: ದೇಣಿಗೆ ನಿರ್ವಹಣೆಗೆ ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ ಪ್ರತ್ಯೇಕವಾಗಿ ಮುಖ್ಯ ಶಿಕ್ಷಕಕರು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‍ಡಿಎಂಸಿ) ಹೆಸರಿನಲ್ಲಿ ಜಂಟಿ ಖಾತೆ ತೆರೆಯಬೇಕಿದೆ. ದಾನಿಗಳಿಂದ ಹಾಗೂ ಇತರೆ ಮೂಲಗಳಿಂದ ಬರುವ ದೇಣಿಗೆ ಸ್ವೀಕರಿಸಿ ಅವರಿಗೆ ‘80ಜಿ’ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ನೀಡಲು ಕ್ರಮವಹಿಸಬೇಕೆಂದು ತಿಳಿಸಲಾಗಿದೆ.

ಪಾರದರ್ಶಕತೆ: ದೇಣಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿರುವ ಬಗ್ಗೆ ಖಚಿತ ಪಡಿಸಲು ಆರ್ಥಿಕ ಇಲಾಖೆಯು ಕೆಟಿಪಿಪಿ ಕಾಯ್ದೆ ಸೆಕ್ಷನ್ 4ರ ಅಡಿಯಲ್ಲಿ 5 ಲಕ್ಷ ರೂ.ಗಳವರೆಗಿನ ಸರಕು, ಸೇವೆ ಸಂಗ್ರಹಣೆಗೆ ವಿನಾಯಿತಿ ನೀಡಿ ತಿದ್ದುಪಡಿ ಮಾಡಲಾಗಿದ್ದು, ಆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದಾನಿಗಳು ನೀಡಿರುವ ದೇಣಿಯ ನಿರ್ವಹಣೆ ಮತ್ತು ಬಳಕೆ ಕುರಿತು ಆ್ಯಪ್‍ನಲ್ಲಿ ಎಲ್ಲ ಸಾರ್ವಜನಿಕರಿಗೂ ಲಭ್ಯವಾಗುವಂತೆ ಅಪ್‍ಲೋಡ್ ಮಾಡಬೇಕು.

ಗಣಕಯಂತ್ರ, ಪ್ರಿಂಟರ್, ಸ್ಕ್ಯಾನರ್ ಮುಂತಾದವುಗಳ ಬಗ್ಗೆ ನಿರ್ದಿಷ್ಟತೆ ಮತ್ತು ಫೆಸಿಫಿಕೇಷನ್‍ಗಳಿಗೆ ಅನುಗುಣವಾಗಿ ನಿಗದಿಪಡಿಸಿ ಮಾನದಂಡಗಳ ಅನ್ವಯ ವ್ಯವಹರಿಸಬೇಕು. ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಅಭಿಯಂತರರ ಮೂಲಕ ನಿರ್ದಿಷ್ಟತೆ ಹಾಗೂ ಕಟ್ಟಡ ವಿನ್ಯಾಸದ ಪ್ರಕಾರ ಮುಂದಿನ ಹೆಜ್ಜೆ ಇಡಬೇಕು. ಈ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಪ್ರಗತಿಯ ತ್ರೈಮಾಸಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕೆಂದು ಬಹಳ ಸ್ಪಷ್ಟವಾಗಿ ಶಿಕ್ಷಣ ಇಲಾಖೆ ಅಧಿಕಾರಿ ವರ್ಗಕ್ಕೆ ತಿಳಿಸಿದೆ.

ಸರಕಾರದ ವೆಚ್ಚ: ರಾಜ್ಯದಲ್ಲಿ ಸರಕಾರಿ ಮತ್ತು ಅನುದಾನಿತ ಸೇರಿ 57,396 ಶಾಲೆಗಳಿಗೆ ಇದರಲ್ಲಿ 2.71 ಲಕ್ಷ ಶಿಕ್ಷಕರು ಕರ್ತವ್ಯನಿರ್ವಹಿಸುತ್ತಿದ್ದಾರೆ. 2019ರಲ್ಲಿ 3 ಸಾವಿರ ಪ್ರಾಥಮಿಕ ಮತ್ತು 2 ಸಾವಿರ ಪ್ರೌಢಶಾಲಾ ಕೊಠಡಿಗಳ ನಿರ್ವಹಣೆಗಾಗಿಯೇ 35.81 ಕೋಟಿ ರೂ.ವೆಚ್ಚ ಮಾಡಿತ್ತು. ಇನ್ನೂ ಕುಡಿಯುವ ನೀರು, ಶೌಚಾಗೃಹ ನಿರ್ವಹಣೆಗಾಗಿ 25 ಕೋಟಿ ರೂ.ಖರ್ಚು ಮಾಡಿತ್ತು. ಇದೇ ರೀತಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇರುವುದರಿಂದ ದಾನಿಗಳಿಂದ ಸಹಾಯ ಬಯಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News