ಯುಎಸ್ ಓಪನ್‌: ಸೆರೆನಾ, ಡೊಮಿನಿಕ್ ಕ್ವಾರ್ಟರ್ ಫೈನಲ್‌ಗೆ

Update: 2020-09-08 18:30 GMT

ನ್ಯೂಯಾರ್ಕ್: ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅಮೆರಿಕನ್ ಓಪನ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಡೊಮಿನಿಕ್ ಥೀಮ್ ಕೂಡ ಅಂತಿಮ-8ರ ಸುತ್ತು ಪ್ರವೇಶಿಸಿದ್ದಾರೆ.

38ರ ಹರೆಯದ ಸೆರೆನಾ ಪ್ರೇಕ್ಷಕರಿಲ್ಲದೆ ಖಾಲಿಯಾಗಿರುವ ಅಶೆ ಅರ್ಥರ್ ಸ್ಟೇಡಿಯಂನೊಳಗೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 15ನೇ ಶ್ರೇಯಾಂಕದ ಗ್ರೀಕ್ ಆಟಗಾರ್ತಿ ಮರಿಯ ಸಕ್ಕಾರಿ ಅವರನ್ನು 6-3, 6-7(6/8), 6-3 ಸೆಟ್‌ಗಳ ಅಂತರದಿಂದ ಮಣಿಸಿದರು. 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟರು.

 ಸೆರೆನಾ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ ಸ್ವೆಟಾನಾ ಪಿರೊಂಕೋವಾರನ್ನು ಎದುರಿಸಲಿದ್ದಾರೆ. ಶ್ರೇಯಾಂಕರಹಿತ ಪಿರೊಂಕೋವಾ ಇದೇ ಮೊದಲ ಬಾರಿ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದು, ಸೋಮವಾರ ಸುಮಾರು 3 ಗಂಟೆಗಳ ಕಾಲ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ನ ಅಲಿಝ್ ಕೊರ್ನೆಟ್‌ರನ್ನು 6-4, 6-7(5), 6-3 ಸೆಟ್‌ಗಳ ಅಂತರದಿಂದ ಸೋಲಿಸಿದ್ದರು.

2 ಗಂಟೆ ಹಾಗೂ 7 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ ಥೀಮ್ 20ರ ಹರೆಯದ ಕೆನಡಾದ ಉದಯೋನ್ಮುಖ ಆಟಗಾರ ಫೆಲಿಕ್ಸ್ ಅಗೆರ್ ಅಲಿಯಾಸಿಮ್‌ರನ್ನು 7-6(7/4), 6-1, 6-1 ಸೆಟ್‌ಗಳ ಅಂತರದಿಂದ ಸೋಲಿಸಿದರು. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ವಿಶ್ವದ 21ನೇ ರ್ಯಾಂಕಿನ ಫೆಲಿಕ್ಸ್ ಅಗೆರ್ ಮೊದಲ ಬಾರಿ ಅಂತಿಮ-16ರ ಸುತ್ತು ಪ್ರವೇಶಿಸಿದ್ದರು.

ಥೀಮ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯದ 21ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೌರ್‌ರನ್ನು ಎದುರಿಸಲಿದ್ದಾರೆ. ಮಿನೌರ್ 2 ಗಂಟೆ, 17 ನಿಮಿಷಗಳ ಕಾಲ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೇಯಾಂಕರಹಿತ ಕೆನಡಾದ ವಾಸೆಕ್ ಪೊಸ್ಪಿಸಿಲ್‌ರನ್ನು 7-6(8/6), 6-3, 6-2 ಸೆಟ್‌ಗಳಿಂದ ಮಣಿಸಿದರು.

ರವಿವಾರ ಅಂತಿಮ-16ರ ಪಂದ್ಯದಲ್ಲಿ ಆಕಸ್ಮಿಕವಾಗಿ ಮಹಿಳಾ ಲೈನ್ ಅಂಪೈರ್‌ಗೆ ಚೆಂಡನ್ನು ಹೊಡೆದ ಹಿನ್ನೆಲೆಯಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಟೂರ್ನಿಯಿಂದ ಅನರ್ಹರಾಗಿ ನಿರ್ಗಮಿಸಿರುವ ಕಾರಣ ಸ್ಪರ್ಧಾವಳಿ ಈಗ ಮುಕ್ತವಾಗಿದೆ. ಅಂತಿಮ-8ರ ಸುತ್ತಿಗೆ ಅಝರೆಂಕಾ: ಯುಎಸ್ ಓಪನ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ವಿಕ್ಟೋರಿಯ ಅಝರೆಂಕಾ ಝೆಕ್‌ನ ಕರೊಲಿನಾ ಮುಚೊವಾರನ್ನು 5-7, 6-1, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ನಾಲ್ಕು ವರ್ಷಗಳ ಬಳಿಕ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಅಝರೆಂಕಾ ಅವರ ಮುಖದಲ್ಲಿ ಮಂದಹಾಸ ಕಂಡುಬಂತು.

 ವಿಶ್ವದ ಮಾಜಿ ನಂ.1 ಆಟಗಾರ್ತಿ ಅಝರೆಂಕಾ ಮೊದಲ ಸೆಟ್ ಸೋಲಿನಿಂದ ಚೇತರಿಸಿಕೊಂಡು ಉಳಿದೆರಡು ಸೆಟ್‌ಗಳನ್ನು ಸುಲಭವಾಗಿ ಗೆದ್ದುಕೊಂಡರು. 2016ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕೊನೆಯ ಬಾರಿ ಅಂತಿಮ-8ರ ಹಂತದಲ್ಲಿ ಕಾಣಿಸಿಕೊಂಡಿದ್ದರು.

31ರ ಹರೆಯದ ಅಝರೆಂಕಾ ಯುಎಸ್ ಓಪನ್‌ನಲ್ಲಿ ಎರಡು ಬಾರಿ ಚಾಂಪಿಯನ್ ಹಾಗೂ ಇನ್ನೆರಡು ಬಾರಿ ದ್ವಿತೀಯ ಸ್ಥಾನ ಪಡೆದಿದ್ದರು. ಯುಎಸ್ ಓಪನ್‌ಗಿಂತ ಮೊದಲು ನಡೆದಿದ್ದ ಸದರ್ನ್ -ವೆಸ್ಟರ್ನ್ ಓಪನ್‌ನಲ್ಲಿ ಅಝರೆಂಕಾ ಪ್ರಶಸ್ತಿ ಜಯಿಸಿದ್ದರು. ಇದು 4 ವರ್ಷಗಳ ಬಳಿಕ ಅಝರೆಂಕಾ ಗೆದ್ದ ಮೊದಲ ಪ್ರಶಸ್ತಿಯಾಗಿತ್ತು.

ಅಝರೆಂಕಾ ಮುಂದಿನ ಸುತ್ತಿನಲ್ಲಿ ಎಲಿಸ್ ಮರ್ಟೆನ್ಸ್ ರನ್ನು ಎದುರಿಸಲಿದ್ದಾರೆ. 16ನೇ ಶ್ರೇಯಾಂಕದ ಬೆಲ್ಜಿಯಂ ಆಟಗಾರ್ತಿ ಅಮೆರಿಕದ ಸೋಫಿಯಾ ಕೆನಿನ್‌ರನ್ನು 6-3, 6-3 ನೇರ ಸಟ್‌ಗಳಿಂದ ಸೋಲಿಸಿ ಸತತ ಎರಡನೇ ವರ್ಷ ಕ್ವಾರ್ಟರ್ ಫೈನಲ್ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News