ದಾವಣಗೆರೆ: ಒಳ ಮೀಸಲಾತಿ ಕಾಯ್ದೆ ಜಾರಿಗೊಳಿಸಲು ಒತ್ತಾಯಿಸಿ ದಸಂಸ ಧರಣಿ

Update: 2020-09-08 18:38 GMT

ದಾವಣಗೆರೆ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ, ಒಳ ಮೀಸಲಾತಿ ಕಾಯ್ದೆ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ನಗರದ ಪಿ.ಬಿ.ರಸ್ತೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಳಿಯಿಂದ ಡಿಸಿ ಕಚೇರಿವರೆಗೆ ತಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸಿ ಘೋಷಣೆ ಕೂಗುತ್ತಾ ಸಾಗಿದ ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಸಮಿತಿ ಜಿಲ್ಲಾ ಸಂಚಾಲಕ ಬಿ.ದುಗ್ಗಪ್ಪ, ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಇದೆಯೆಂಬುದಾಗಿ ಸುಪ್ರೀಂ ಕೋರ್ಟ್‍ನ ನ್ಯಾಯಪೀಠ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ, ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ದೇಶದ ಎಲ್ಲಾ ಜಾತಿ, ಜನಾಂಗಗಳ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿ ಬದುಕುವ ಅವಕಾಶವಿದೆ. ಶಿಕ್ಷಣ, ಸರ್ಕಾರಿ ಉದ್ಯೋಗ, ರಾಜಕೀಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಹಂಚಿಕೊಂಡು, ಒಗ್ಗಟ್ಟಿನಿಂದ ಸಮಾನತೆಯ ಕಡೆಗೆ ಸಾಗಬೇಕು, ದೇಶದಲ್ಲಿ ಶಾಂತಿ, ಸಹೋದರತ್ವ ನೆಲೆಸಬೇಕೆಂಬ ಕರೆ ನೀಡಿದ್ದರು ಎಂದು ಅವರು ತಿಳಿಸಿದರು.

ಏಳು ದಶಕಗಳ ಕಾಲ ಮೀಸಲಾತಿ ಪಡೆದ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳ ಮಧ್ಯೆ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯು ಸಮರ್ಪಕವಾಗಿ ಮತ್ತು ನ್ಯಾಯಯುತವಾಗಿ ಹಂಚಿಕೆಯಾಗಿಲ್ಲ. ಸಹಜವಾಗಿಯೇ ಇದು ಅಸಮಾಧಾನ ಮತ್ತು ನೋವು ಉಲ್ಭಣಗೊಂಡವು. ದೇಶದಲ್ಲಿ ಮೊದಲ ಬಾರಿಗೆ ಪಂಜಾಬಿನಲ್ಲಿ ಒಳ ಮೀಸಲಾತಿ ಆಂದೋಲನ ಆರಂಭಗೊಂಡಿತು ಎಂದು ಅವರು ಹೇಳಿದರು.

ಆಂಧ್ರದಲ್ಲಿ ಮಾದಿಗರ ಒಳ ಮೀಸಲಾತಿ ಆಂದೋಲನವನ್ನು 1980 ಮತ್ತು 200ರ ದಶಕದಲ್ಲಿ ಆರಂಭಿಸಿದರು. ಇದರಿಂದ ಹೊಲೆಯರು, ಮಾದಿಗರ ಮಧ್ಯೆ ಅಸಹಿಷ್ಣುತೆ, ಅಸಮಾಧಾನ, ಹಿಂಸೆ ಮೂಡಿದವು. ಇದನ್ನು ಮನಗಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ಪರಿಶಿಷ್ಟರ ಒಳ ಮೀಸಲಾತಿ ಕಾನೂನು ಜಾರಿಗೆ ಆಯೋಗ ರಚಿಸುವಂತೆ 2000ರಿಂದಲೂ ಚರ್ಚೆ, ಸಮಾವೇಶ, ಬಹಿರಂಗ ಸಭೆ, ಧರಣಿ, ಅಹೋರಾತ್ರಿ ಧರಣಿ, ತಮಟೆ ಚಳವಳಿ ನಡೆಸಿತ್ತು ಎಂದು ಅವರು ವಿವರಿಸಿದರು.

ಪರಿಣಾಮ 2005ರಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ಅಧ್ಯಯನ ನಡೆಸಲು ಆಯೋಗ ರಚಿಸಲಾಯಿತು. ನಂತರ ಜಸ್ಟೀಸ್ ಎ.ಜೆ.ಸದಾಶಿವರವರು ಆಯೋಗದ ಅಧ್ಯಕ್ಷರಾದ ನಂತರ ಅಧ್ಯಯನ ಕೈಗೊಂಡು, ಪೂರ್ಣಗೊಳಸಿ, ಜೂನ್ 2012ರಲ್ಲಿ ಅಂದಿನ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಯಾವುದೇ ಸರ್ಕಾರ ವರದಿ ಅಂಗೀಕರಿಸಿಲ್ಲ. 2017ರಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಹೋದಾಗ ಲಾಠಿ ಚಾರ್ಜ್ ಮಾಡಲಾಯಿತು ಎಂದು ಅವರು ಕಿಡಿಕಾರಿದರು.

ಹೋರಾಟ ನಿರಂತರವಾಗಿದ್ದರೂ ಸರ್ಕಾರ ಮಾತ್ರ ವರದಿ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಲಿಲ್ಲ. ಕೇಂದ್ರಕ್ಕೆ ಶಿಫಾರಸ್ಸು ಮಾಡದೇ, ದಲಿತರೊಳಗೆ ಓಟು ರಾಜಕಾರಣ ಮಾಡುತ್ತಾ ಒಳ ಮೀಸಲಾತಿ ವರದಿಯನ್ನು ಮೂಲೆಗೆ ತಳ್ಳುವ ಕೆಲಸವಾಗಿದೆ. ಈಗಿನ ಸರ್ಕಾರವು ಆಯೋಗದ ವರದಿ ಅಂಗೀಕರಿಸಿ, ಒಳ ಮೀಸಲಾತಿ ಜಾರಿಗೊಳಿಸಲೆಂದು ರಾಜ್ಯವ್ಯಾಪಿ ಜಿಲ್ಲಾ ಕೇಂದ್ರದಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಮಿತಿ ಮುಖಂಡರಾದ ಚನ್ನಗಿರಿ ಸಿ.ಟಿ.ಸದಾನಂದ, ಬೂಸೇನಹಳ್ಳಿ ನಾಗರಾಜ, ಸುರೇಶ ತೇರದಾಳ ಹರಿಹರ, ನ್ಯಾಮತಿ ಓಬಳೇಶ, ಪ್ರಭಾಕರ ಪಾಂಡೋಮಟ್ಟಿ, ಟಿ.ರವಿಕುಮಾರ, ಗೌರಪುರ ಕುಬೇರಪ್ಪ, ಸತೀಶ ಕುಮಾರ ಬಾಡ, ಹರಿಹರ ಶ್ರೀನಿವಾಸ, ಮಲ್ಲಿಕಾರ್ಜುನ ವಂದಾಲಿ, ಡಿ.ರಾಘವೇಂದ್ರ, ನವಿಲೇಹಾಳ ಕೃಷ್ಣಪ್ಪ, ಬಿ.ಹನುಮಂತಪ್ಪ ಹರಳಯ್ಯ, ದೊಡ್ಡೇರಿಕಟ್ಟೆ ತಿಮ್ಮಣ್ಣ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News