ನಟಿ ರಾಗಿಣಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ: ಬಿ.ವೈ.ವಿಜಯೇಂದ್ರ ಸ್ಪಷ್ಟನೆ

Update: 2020-09-08 18:40 GMT

ಮಂಡ್ಯ, ಸೆ.8: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬುಡಸಮೇತ ಕಿತ್ತುಹಾಕಲು ರಾಜ್ಯ ಸರಕಾರ ದಿಟ್ಟ ನಿಲುವು ತೆಗೆದುಗೊಂಡಿದೆ. ಇದಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ಕೊಡುತ್ತಿದ್ದು, ಸಾರ್ವಜನಿಕರ ಸಹಕಾರವೂ ಅಗತ್ಯ ಇದೆ. ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಪೀಳಿಗೆಗೆ ಶಾಪವಾಗಿರುವ ಈ ಮಾಫಿಯಾವನ್ನು ಮಟ್ಟಹಾಕಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ರಾಜ್ಯ ಸರಕಾರ ದಿಟ್ಟ ನಿಲುವು ತೆಗೆದುಕೊಂಡಿದೆ ಎಂದರು.

ಚಿತ್ರನಟನಟಿಯರು ಎಲ್ಲಾ ಪಕ್ಷಗಳಿಗೂ ಚುನಾವಣೆಯಲ್ಲೂ ಪ್ರಚಾರ ಮಾಡಿದ್ದಾರೆ. ಅಂತೆಯೇ ನಟಿ ರಾಗಿಣಿ ಅವರೂ ಉಪಚುನಾವಣೆಯಲ್ಲಿ ಸಹಜವಾಗಿ ಪ್ರಚಾರ ಮಾಡಿದ್ದಾರೆ. ಆದರೆ, ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲವೆಂದು ಅವರು ಸ್ಪಷ್ಟಪಡಿಸಿದರು.

ಪಾಕಿಸ್ತಾನದಲ್ಲಿ ಬೆಳೆದು ಪಂಜಾಬ್ ಮೂಲಕ ಬೇರೆ ಬೇರೆ ರಾಜ್ಯಗಳಿಗೆ ರವಾನಿಸಿ ದೇಶದ ಯುವಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿದೆ. ಈ ಮಾಫಿಯಾದವರ ಜತೆ ಬಿಜೆಪಿಯ ಯಾವ ಮುಖಂಡರೂ ಸಂಪರ್ಕ ಹೊಂದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಉಳಿದಿರುವ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಶೀಘ್ರದಲ್ಲೇ ಆಗಿದೆ. ನಾನು ಯಾವ ಜಿಲ್ಲೆಯಿಂದ ರಾಜಕೀಯ ಪ್ರವೇಶ ಮಾಡಬೇಕೆಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಸದ್ಯ ಪಕ್ಷ ಬಲವರ್ಧನೆ ನನ್ನ ಧ್ಯೇಯ ಎಂದು ಅವರು ತಿಳಿಸಿದರು.

ಕೆ.ಆರ್.ಪೇಟೆ ವಿಧಾನಸಭಾ ಚುನಾವಣೆಯ ಬಿಜೆಪಿಯ ವಿಜಯಯಾತ್ರೆ ಇಡೀ ಜಿಲ್ಲೆಗೂ ವಿಸ್ತರಿಸಲಿದೆ. ತವರು ಜಿಲ್ಲೆ ಮಂಡ್ಯ ಸೇರಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬದ್ಧರಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಯಡಿಯೂರಪ್ಪ ಸರಕಾರ ಕೊಟ್ಟಷ್ಟು ಅನುದಾನವನ್ನು ಬೇರೆ ಯಾವ ಮುಖ್ಯಮಂತ್ರಿಯೂ ಮೈಶುಗರ್, ಪಿಎಸ್‍ಎಸ್‍ಕೆ ಪುನಶ್ಚೇತನಕ್ಕೆ ಕೊಟ್ಟಿಲ್ಲ. ಇತರ ಅಭಿವೃದ್ಧಿ ಕೆಲಸಗಳಿಗೂ ಸಾಕಷ್ಟು ಅನುದಾನ ನೀಡಿದ್ದಾರೆ. ಈಚೆಗೆ ಕೆ.ಆರ್.ಪೇಟೆ ತಾಲೂಕಿನಲ್ಲಿ 260 ಕೋಟಿ ರೂ.ವೆಚ್ಚದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲೆಯಲ್ಲಿ ಬಿಜೆಪಿಗೆ ಹಲವು ಮಹನೀಯರು ಶ್ರಮಿಸಿದ್ದಾರೆ. ಅವರ ಶ್ರಮವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಲು ಕಾರ್ಯಕರ್ತರ ಜತೆ ಶ್ರಮಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಜಿಪಂ ಸದಸ್ಯ ಚಂದಗಾಲು ಎನ್.ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್, ಡಾ.ಸಿದ್ದರಾಮಯ್ಯ, ಎಚ್.ಪಿ.ಮಹೇಶ್, ಎಚ್.ಆರ್.ಅರವಿಂದ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News