ಉನ್ನತ ಶಿಕ್ಷಣ ಸಂಸ್ಥೆ ತೆರೆಯಲು ಮಾರ್ಗಸೂಚಿ ಬಿಡುಗಡೆ

Update: 2020-09-09 04:12 GMT

ಹೊಸದಿಲ್ಲಿ : ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಕೌಶಲ ಕೇಂದ್ರಗಳು ಈ ತಿಂಗಳ 21ರಿಂದ ತರಗತಿಗಳನ್ನು ಆರಂಭಿಸಲಿದ್ದು, ಇವು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ.

ಪ್ರತ್ಯೇಕ ಕಾಲಾವಧಿಯಲ್ಲಿ, ಗುಂಪುಗೂಡುವಿಕೆಗೆ ಅವಕಾಶವಾಗದಂತೆ ತರಗತಿಗಳನ್ನು ನಡೆಸಬೇಕು ಹಾಗೂ ಡೆಸ್ಕ್‌ಗಳ ನಡುವೆ ಆರು ಅಡಿಗಳ ಅಂತರ ಕಡ್ಡಾಯ. ಇಡೀ ಆವರಣವನ್ನು ಸೋಂಕುಮುಕ್ತಗೊಳಿಸಬೇಕು ಎಂದು ಸೂಚಿಸಲಾಗಿದೆ.

ಪ್ರತಿ ಡೆಸ್ಕ್ ಹಾಗೂ ಕುರ್ಚಿಗಳ ನಡುವೆ ಕನಿಷ್ಠ ಆರು ಅಡಿ ಅಂತರವನ್ನು ಖಾತರಿಪಡಿಸುವ ರೀತಿಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ತರಗತಿ ಚಟುವಟಿಕೆಗಳನ್ನು ನಡೆಸುವಾಗ ಗುಂಪುಗೂಡಲು ಅವಕಾಶ ನೀಡಬಾರದು; ಸೂಕ್ತ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತರಗತಿ ಆವರಣವನ್ನು ಸೋಂಕುಮುಕ್ತಗೊಳಿಸುವುದು ಕಡ್ಡಾಯ. ತರಗತಿಯಲ್ಲಿ ಪಾಠ ಹಾಗೂ ಆನ್‌ಲೈನ್ ಬೋಧನೆ ಎರಡನ್ನೂ ಅಳವಡಿಸಿಕೊಳ್ಳಬೇಕು ಮತ್ತು ಮೌಲ್ಯಮಾಪನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಲಾಗಿದೆ.

ವಿದ್ಯಾರ್ಥಿ ನಿಲಯಗಳಲ್ಲಿ ಕೊಠಡಿಯನ್ನು ಹಂಚಿಕೊಳ್ಳುವ ವ್ಯವಸ್ಥೆ ಇದ್ದರೆ ಅಥವಾ ಡಾರ್ಮೆಟರಿ ಇದ್ದಲ್ಲಿ, ಕನಿಷ್ಠ ಆರು ಅಡಿಗಳ ಅಂತರ ನಿರ್ವಹಿಸಬೇಕು. ಸಾಧ್ಯವಿದ್ದಲ್ಲಿ ತಾತ್ಕಾಲಿಕ ವಿಭಜನೆಯ ಸಾಧ್ಯತೆ ಪರಿಶೀಲಿಸಬೇಕು. ಯಾವುದೇ ವಿದ್ಯಾರ್ಥಿಗಳಲ್ಲಿ ರೋಗಲಕ್ಷಣ ಕಂಡುಬಂದಲ್ಲಿ ಪ್ರತ್ಯೇಕ ಕೊಠಡಿಗೆ ವರ್ಗಾಯಿಸಬೇಕು.

ಆವರಣದೊಳಗೇ ಮೆಸ್ ಸೌಲಭ್ಯವಿದ್ದಲ್ಲಿ ಅಲ್ಲೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News