ಶಿವಮೊಗ್ಗ: ಗಾಂಜಾ ವಿರುದ್ಧ ಪೊಲೀಸರ ಕಾರ್ಯಾಚರಣೆ; ಒಟ್ಟು ಐವರ ಬಂಧನ

Update: 2020-09-09 11:56 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಸೆ.09: ಗಾಂಜಾ ಮಾರಾಟ ಜಾಲದ ವಿರುದ್ಧ ಪೊಲೀಸರು ಮತ್ತೆ ಕಾರ್ಯಾಚರಣೆ ಕೈಗೊಂಡಿದ್ದು, ಇಂದು ನಾಲ್ವರನ್ನು ಭದ್ರಾವತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಕೂಡಾ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಹಲವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದರು.

ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ ಅವರಿಂದ ಸುಮಾರು 20 ಸಾವಿರ ಬೆಲೆ ಬಾಳುವ 1ಕೆಜಿ 250 ಗ್ರಾಂ. ಗಾಂಜಾ ಮತ್ತು ಇದಕ್ಕಾಗಿ ಬಳಸಿದ್ದ ಎರಡು ದ್ವಿಚಕ್ರ ವಾಹನವನ್ನು ಹಳೆನಗರ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.

ಈ ಆರೋಪಿಗಳನ್ನು ಶೇಖ್ ಅಬೂಬ‌ಕರ್ (22), ತೌಫೀಕ್(23), ಜಾಫರ್ ಸಾದಿಕ್ (24), ಸಾದಿಕ್ ಪಾಷ(31) ಎಂದು ಗುರುತಿಸಲಾಗಿದೆ. ಇವರು ಹೊಳೆಹೊನ್ನೂರು ರಸ್ತೆಯ ಸೀಗೆಬಾಗಿ ಕ್ರಾಸ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭದ್ರಾವತಿಯ ಡಿವೈಎಸ್ಪಿ ಸುಧಾಕರ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಾಘವೇಂದ್ರ ಕಾಂಡಿಕೆ ಅವರ ನೇತೃತ್ವದಲ್ಲಿ ಪಿಎಸ್‌ಐ ಶ್ರೀನಿವಾಸ್ ಅವರ ತಂಡ ಈ ಕಾರ್ಯಾಚರಣೆ ನಡೆಸಿತ್ತು.

ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗದ ವಿನೋಬನಗರ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿ ಆತನಿಂದ 12,500 ರೂ.ಮೌಲ್ಯದ 400 ಗ್ರಾಂ. ಗಾಂಜಾ, 620 ರೂ.ನಗದು ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಶರಾವತಿ ನಗರದ ಜಬೀವುಲ್ಲ (19) ಎಂದು ಗುರುತಿಸಲಾಗಿದೆ. ಈತನ ವಿರುದ್ದ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News